ಅಕಣ ಬರಹಗಳಲಲ ಸಹತಯ - ಸಮಜಕ ಸಪದನಗಳ.

Read full text
Authors: ಕನ್ಯಾಕುಮಾರಿ ಎಸ್
Cited by: 0

Abstract

ಅಮೂರ್ತ: ಕನ್ನಡ ಸಾಹಿತ್ಯದಲ್ಲಿ ಇಂದು ಅಂಕಣ ಬರಹಗಳು ಹಲವು ವೈವಿಧ್ಯಮಯ ಸೃಷ್ಟಿಗೆ ಕಾರಣವಾಗಿವೆ. ವಿವಿಧ ಕ್ಷೇತ್ರಗಳನ್ನು ಸಾಹಿತ್ಯದ ಮಡಿಲಿಗೆ ತುಂಬಿಕೊಳ್ಳುವ ಸ್ಫುಟತೆಯನ್ನು ಗಳಿಸಿಕೊಂಡಿರುವುದು ಮಾತ್ರವಲ್ಲದೆ ಕಾಲದ ವೇಗಕ್ಕೆ ತನ್ನ ವ್ಯಾಪ್ತಿ ಹಾಗೂ ದೃಷ್ಟಿಕೋನದ ಸುಲಭತೆಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಾ ಸಾಗುತ್ತಿದ್ದು, ಬಹು ಪ್ರಚಲಿತ ಸಾಹಿತ್ಯ ಪ್ರಕಾರವಾಗಿದೆ. ಇತ್ತೀಚೆಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಮಯ ಮಿತಿಯ ಜಗತ್ತಿಗಾಗಿ ಸಿದ್ಧವಾಗುತ್ತಿರುವ ಆಕರ್ಷಣೀಯ ಬರಹಗಳು, ಕೈಪಿಡಿಗಳು, ಲೇಖನಗಳು ಸಾಹಿತ್ಯ ಅಧ್ಯಯನಕ್ಕೆ ಅಮೂಲ್ಯವಾಗಿರುವಂತೆ, ಅಂಕಣ ಬರಹಗಳು ವಿಷಯ, ವಿಚಾರ ಹಾಗೂ ವಿವಿಧ ಚಿಂತನೆಗಳ ಮೂಲಕ ಮಾಹಿತಿಯ ಜೊತೆಗೆ ವಿವೇಚನೆ, ವಿಶ್ಲೇಷಣೆಗೊಳಪಡಿಸುತ್ತಾ ಸಾಹಿತ್ಯ ಕ್ಷೇತ್ರದಲ್ಲಿ ಪ್ರಭಾವ ಬೀರಿವೆ. ಸಾಹಿತ್ಯ, ಶೈಕ್ಷಣಿಕ, ಸಾಮಾಜಿಕ, ವೈಜ್ಞಾನಿಕ, ರಾಜಕೀಯ, ಸುದ್ದಿ, ಕ್ರೀಡೆ, ಪ್ರವಾಸ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮದೇ ಛಾಪೂ ಮೂಡಿಸಿವೆ. ಒಂದು ಅರ್ಥದಲ್ಲಿ ಅಂಕಣ ಬರಹಗಳನ್ನು ಜ್ಞಾನಾರ್ಜನೆಗೆ, ಸೂಕ್ತ ಸಾಧನವಾಗಿ ಬಳಸಿಕೊಳ್ಳಲಾಗುತ್ತಿದೆ. ಸಾಹಿತ್ಯದ ಇನ್ನಿತರ ಪ್ರಕಾರಗಳಲ್ಲಿ ಆಗುತ್ತಿರುವ ಪ್ರಯೋಗಗಳಂತೆಯೇ ಅಂಕಣ ಬರಹಗಳಲ್ಲಿಯೂ ವಿಭಿನ್ನ ಪ್ರಯೋಗಗಳು ಕಾಣಿಸಿಕೊಳ್ಳುತ್ತಿವೆ. ಪತ್ರಿಕಾ ಬರಹಗಳಲ್ಲಿ ವಿಶೇಷವಾದ ಅಂಕಣಗಳನ್ನು ಪರಿಚಯಿಸುತ್ತಾ, ಸಮಾಜವನ್ನು ವಿಶ್ಲೇಷಣೆಗೊಳಪಡಿಸುವುದನ್ನು ಕಾಣಬಹುದು. ಭಾರತೀಯ ಭಾಷೆಗಳಲ್ಲೂ, ಪ್ರಪಂಚದ ವಿವಿಧ ಭಾಷೆಗಳಲ್ಲೂ ತಮ್ಮ ಪರಿಸರದ ಮೂಲಕ ವಿಶ್ವ ವಿಶ್ಲೇಷಣೆಗೆ ತೊಡಗಲು ಅಂಕಣ ಸಾಹಿತ್ಯವನ್ನು ವೇದಿಕೆಯಾಗಿ ಬಳಸಿಕೊಳ್ಳುತ್ತಿರುವುದು ವಿಶೇಷ. ಈ ದೃಷ್ಟಿಕೋನಗಳಿಂದ ವಿವೇಚಿಸಿದಾಗ ಅಂಕಣ ಸಾಹಿತ್ಯದ ಚರಿತ್ರೆ, ಬೆಳವಣಿಗೆಯ ಧೀರ್ಘ ವಿಶ್ಲೇಷಣೆಯು ಮಹತ್ವದ್ದಾಗಿ ಕಂಡುಬರುತ್ತದೆ. ಮುಖ್ಯ ಪದಗಳು: ಸಾಹಿತ್ಯಚಿಂತನೆ, ಶೈಕ್ಷಣಿಕಚಿಂತನೆ, ಸಾಮಾಜಿಕ ಸ್ಪಂದನೆ, ಮಹಿಳಾಸಂವೇದನೆ, ಪತ್ರಿಕೆ ಬರಹಗಳು ಪ್ರಸ್ತಾವನೆ: ಕನ್ನಡ ಸಾಹಿತ್ಯದ ಪ್ರಕಾರಗಳಲ್ಲಿ ಒಂದಾದ ಅಂಕಣ ಬರಹಗಳು ಒಂದು ವಿಶಿಷ್ಠ ಪ್ರಕಾರವಾಗಿದ್ದು, ನಿರ್ಧಿಷ್ಟವಾದ ಶೀರ್ಷಿಕೆಯನ್ನು ಒಳಗೊಂಡ, ನಿಯತವಾಗಿ ಬರೆಯುವ ವಿಚಾರ ಚಿಂತನೆಯ ಬರಹವನ್ನೆ ಅಂಕಣ ಬರಹವೆಂದು ಹೇಳಲಾಗಿದೆ. ಪತ್ರಿಕೆ, ನಿಯತಕಾಲಿಕೆಗಳಲ್ಲಿ ವಿವಿಧ ಮಾದರಿಗಳಲ್ಲಿ ಪ್ರಕಟಗೊಳ್ಳುವ ಈ ಅಂಕಣ ಬರಹಗಳು ಸಮಕಾಲೀನ ವಿಷಯ ವಿದ್ಯಮಾನಗಳನ್ನೊಳಗೊಂಡ ವಿಭಿನ್ನ ಶೈಲಿಯ ಲೇಖನಗಳಾಗಿವೆ. ತಾತ್ವಿಕತೆ ಹಾಗು ಚಿಂತನೆಗಳ ಆಧಾರದ ಮೇಲೆ ರಚಿತವಾಗಿ ಓದುಗರಲ್ಲಿ ತಮ್ಮದೇ ಆದ ಸ್ಥಾನವನ್ನು ಅಂಕಣ ಬರಹಗಳು ಪಡೆದಿವೆ. ‘ಅಂಕಣ’ ಎಂದರೆ ಎರಡು ಕಂಬಗಳ ನಡುವಿನ ಪ್ರದೇಶ ಎಂಬುದು ನಿಘಂಟು ಕೊಡುವ ಅರ್ಥ, ಇಂಗ್ಲೀಷ್‌ನಲ್ಲಿ ಇದನ್ನು `ಕಾಲಂ’ ಎಂದು ಬಳಸಲಾಗಿದೆ. “ಒಂದು ನಿರ್ಧಿಷ್ಟವಾದ ಚೌಕಟ್ಟಿನಲ್ಲಿ ಒಬ್ಬ ಬರಹಗಾರ ತನ್ನ ವಿಚಾರಧಾರೆಯನ್ನು ಪತ್ರಿಕೆಯೊಂದರಲ್ಲಿ ಕಾಲದ ಮಿತಿಗೆ ಒಳಪಟ್ಟು ನಿರ್ಧಿಷ್ಟ ಪ್ರಮಾಣದ ಶಬ್ಧಗಳ ಮಿತಿಯಲ್ಲಿ ಹೇಳಬಹುದಾದ ಬರಹವನ್ನು ಸಾಹಿತ್ಯಕವಾಗಿ ಅಂಕಣ ಎಂದು ವ್ಯಾಖ್ಯಾನಿಸಬಹುದು.” (ಡಾ.ವಿದ್ಯಾಶಂಕರ. ಅಂಕಣ- ಮುನ್ನುಡಿ) ಅಂಕಣವೆಂದರೆ ವಿಷಯ, ವಿಚಾರ, ವಿಮರ್ಶೆ, ಸಂಶೋಧನೆ, ಅಧ್ಯಯನ ಮೊದಲಾದ ಸೂಕ್ಷ್ಮ ಒಳನೋಟಗಳನ್ನು ಸೂಕ್ಷ್ಮವಾಗಿ ತೆರದಿಡುವ ಒಂದು ಚೌಕಟ್ಟಾಗಿದೆ. ಪ್ರಮುಖ ವಿಷಯಗಳನ್ನು ವಿಂಗಡಿಸಿ ಕೊಂಡು ಆಯಾ ಕ್ಷೇತ್ರದಲ್ಲಿ ಪರಿಣಿತರಾದವರು ವಿಶ್ವದೊಂದಿಗೆ ತಮ್ಮನ್ನು ಪರೀಕ್ಷಿಸಿಕೊಳ್ಳುತ್ತಿದ್ದಾರೆ. ಅನುವಾದ ಹಾಗು ಅಂತರ್ಜಾಲದ ಹೊಸ ಬದಲಾವಣೆಗಳ ದಿಕ್ಸೂಚಿಯಲ್ಲಿ ವಿಶ್ವಸಾಹಿತ್ಯವಾಗಿ, ಸುಲಭವಾಗಿ ಓದಲು ಎಲ್ಲರಿಗು ಸಾಧ್ಯವಾಗುತ್ತಿದೆ. ಈ ದಿಸೆಯಲ್ಲಿ ಎಲ್ಲರೊಂದಿಗೂ ತಮ್ಮ ಚಿಂತನೆಗಳನ್ನು ಗುರುತಿಸಿಕೊಳ್ಳುವ ವೇದಿಕೆಯಾಗಿ ಅಂಕಣ ಸಾಹಿತ್ಯದ ಸ್ವರೂಪ ಪ್ರತಿಬಿಂಬಿಸುತ್ತಿದೆ. ಒಟ್ಟಾರೆ ಅಂಕಣ ಸಾಹಿತ್ಯವು ಆಯಾಕಾಲದ ವಾಸ್ತವಿಕ ಸ್ವರೂಪವನ್ನು ಕಟ್ಟಿಕೊಡುವ ಶೈಲಿಯಾಗಿದೆ. ಒಂದು ನಿರ್ಧಿಷ್ಟ ವಿಷಯ ಕುರಿತು ಎಲ್ಲಾ ಆಯಾಮಗಳಲ್ಲೂ, ಮುಖ್ಯವಾಗಿ ವಾಸ್ತವಕ್ಕೆ ಅಗತ್ಯವಾದ ವಿಚಾರಗಳೊಂದಿಗೆ ತಾರ್ಕಿಕವಾಗಿ ಚರ್ಚಿಸುವ ನಿರ್ಧಿಷ್ಟ ವ್ಯಾಪ್ತಿಯ ಬರಹ ಎಂದು ಗುರುತಿಸಬಹುದಾಗಿದೆ. ಅಂಕಣ ಬರಹಗಳ ಹಿನ್ನೆಲೆ: ಅಂಕಣ ಬರಹಗಳ ಉದಯವು ಪತ್ರಿಕೋದ್ಯಮದ ಪ್ರಾರಂಭದೊಂದಿಗೆ ಬೆಳೆದಿದೆ ಎಂದು ಗುರುತಿಸಲಾಗಿದೆ. ಹತ್ತೊಂಭತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಅಂಕಣ ಬರಹದ ರೂಪದಲ್ಲಿ ಅನೇಕ ಬರಹಗಳು ಆಂಗ್ಲಭಾಷೆಯ ಪ್ರಮುಖ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳತೊಡಗಿದವು. ಆರಂಭದಲ್ಲಿ ಡಿಕ್‌ಸನ್‌ನ ``Letters from a Farmer'' ಪೆನ್ಸಿಲ್ವೇನಿಯಾ ಕ್ರಾನಿಕಲ್’ನಲ್ಲಿ ಹಾಗೂ ಜೇಮ್ಸ್ ರನ್ಯೂ ಇಂಗ್ಲೆಂಡ್ ಕೋರೆಂಟ್' ನಲ್ಲಿನ ಅಂಕಣಗಳು ಗಮನಸೆಳೆದವು. ದೇಶೀಯ ನೆಲೆಯಲ್ಲಿ ಭಾರತದಲ್ಲಿ ಅಂಕಣ ಬರಹಗಳು ಸ್ವಾತಂತ್ರ್ಯ ಪೂರ್ವದಲ್ಲಿಯೇ ಕಾಣಿಸಿಕೊಂಡವು. ಮೊದಲ ಸುದ್ದಿ ಪತ್ರಿಕೆಯಾಗಿದ್ದ `ದಿ ಬೆಂಗಾಲ್ ಗೆಜೆಟ್'ನಲ್ಲಿ ರಾಜಕೀಯ ವಿಷಯಗಳಿಗೆ ಮೀಸಲಾದ ಅಂಕಣವೊಂದು ಪ್ರಕಟವಾಗುತ್ತಿದ್ದರೂ ಕ್ರಾಂತಿಕಾರಿ ಬರಹಗಳಿಗೆ ಇದರಲ್ಲಿ ಅವಕಾಶವಿರಲಿಲ್ಲ. ಮುಖ್ಯವಾಗಿ ರಾಜಕೀಯ ವಿಚಾರಗಳು ಇದರಲ್ಲಿ ಚರ್ಚಿತವಾಗುತ್ತಿದ್ದವು. ಸ್ವಾತಂತ್ರ್ಯ ನಂತರದಲ್ಲಿ ಪತ್ರಿಕೆಗಳ ಸಂಖ್ಯೆಯು ವೃದ್ಧಿಸಿ, ಪ್ರಾಂತೀಯ ಭಾಷೆಗಳ ಪತ್ರಿಕೆಗಳಲ್ಲಿಯೂ ದೈನಂದಿನ ಅಂಕಣಗಳು ಸ್ಥಾನ ಪಡೆದುಕೊಂಡಿವೆ. ಕನ್ನಡ ಭಾಷೆಯಲ್ಲಿ ಅಂಕಣ ಬರಹಗಳ ಬೆಳವಣಿಗೆಯತ್ತ ಗಮನಹರಿಸಿದಾಗ ಅಂಕಣ ಸಾಹಿತ್ಯಕ್ಕೆ ಸುದೀರ್ಘವಾದ ಪರಂಪರೆಯೆ ಕಂಡು ಬರುತ್ತದೆ. ಸಂಪಾದಕೀಯ ಬರಹಗಳು, ಸಾಹಿತಿಗಳು, ಪತ್ರಕರ್ತರ ಬರಹಗಳು ಅಷ್ಟೇ ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ವೃತ್ತಿ ನಿರತರಾದವರು ತಮ್ಮದೇ ಆದ ಶೈಲಿಯಲ್ಲಿ ಅಂಕಣಗಳನ್ನು ಬರೆದಿದ್ದಾರೆ. ಕನ್ನಡದ ಆರಂಭದ ಪತ್ರಿಕೆಗಳ ಸಂಪಾದಕೀಯ ಬರಹಗಳಲ್ಲಿ ಅಂಕಣಗಳು ಗಮನಸೆಳೆದಿವೆ. ಹಿರಿಯ ಲೇಖಕರು ಸಂಪಾದಕರುಗಳಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಟಿ. ಎಸ್.ರಾಮಚಂದ್ರರಾವ್, ವೈ.ಎನ್.ಕೆ, ಕು.ಶಿ. ಹರಿದಾಸ ಭಟ್ಟರು ಮೊದಲಾದವರ ಸಂಪಾದಕೀಯ ಬರಹಗಳು ಕನ್ನಡ ಅಂಕಣ ಪರಂಪರೆಗೆ ನಾಂದಿಯಾಗಿವೆ. ಇತ್ತೀಚಿನ ದಶಕಗಳಲ್ಲಿ ಡಾ.ಹಾ. ಮಾ. ನಾಯಕ, ಎಚ್.ಎಸ್.ಕೆ, ಎಲ್.ಎಸ್.ಶೇಷಗಿರಿರಾವ್. ಪೂರ್ಣಚಂದ್ರ ತೇಜಸ್ವಿ., ಕೀರ್ತಿ ನಾಥ ಕುರ್ತುಕೋಟಿಯವರ ಬರಹಗಳು `ಅಂಕಣಗಳು’ ಸಹ ಪ್ರಭಾವಿ ಮಾಧ್ಯಮ ಎಂಬುದನ್ನು ನಿರೂಪಿಸಿವೆ. ಸಾಹಿತ್ಯ ಸಂವೇದನೆ: ೧೯ನೇ ಶತಮಾನದ ಆರಂಭದ ದಶಕಗಳ ಕನ್ನಡ ಸಾಹಿತ್ಯದಲ್ಲಿ ಪತ್ರಿಕೆಗಳ ಪಾತ್ರ ಗಮನೀಯವಾಗಿದ್ದು, ಪತ್ರಿಕೋದ್ಯಮದ ಬೆಳವಣಿಗೆಯೊಂದಿಗೆ ಸಾಹಿತ್ಯ ಸಮೃದ್ಧಿಯಾಯಿತು. ಭಾಷೆ ಬೆಳೆಯಿತು. ಅರಿವು ವಿಸ್ತರಿಸಿತು. ವಿಚಾರಪೂರ್ಣ ಲೇಖನಗಳು, ಸಮಾಜ ಸುಧಾರಣ ಚಳುವಳಿಗಳ ಬರಹಗಳು ವಿಸ್ತರಿಸಿದವು. ವಿಭಿನ್ನ ರೀತಿಯ ಪ್ರಯೋಗಗಳು ಕಾಣಿಸಿಕೊಳ್ಳತೊಡಗಿದವು. ಅಂಕಣ ಬರಹಗಳು ವಿಶೇಷ ಸ್ಥಾನವನ್ನು ಪಡೆದುಕೊಂಡು, ಕಾಲಕ್ರಮೇಣದಲ್ಲಿ ತಮ್ಮ ಹರಹು ವಿಸ್ತರಿಸಿಕೊಳ್ಳುತ್ತಾ ಬಂದಿರುವುದನ್ನು ಗಮನಿಸಬಹುದಾಗಿದೆ. ಅಂಕಣ ಬರಹಗಳ ವಸ್ತು ವ್ಯಾಪ್ತಿ ವಿಸ್ತಾರವಾಗಿರುವುದರಿಂದ ಸುತ್ತಲಿನ ಸಾಹಿತ್ಯಕ ಪರಿಸರ ಅಂಕಣಕಾರರನ್ನು ಸ್ಪರ್ಶಿಸುತ್ತದೆ. ತನ್ನ ಸಂಪರ್ಕಕ್ಕೆ ಬಂದ ವ್ಯಕ್ತಿ, ವಿಚಾರಗಳ ಕುರಿತು ಅಂಕಣಕಾರರು ತಮ್ಮ ಬರಹಗಳ ಮೂಲಕ ಆತ್ಮೀಯ ಚಿತ್ರಣ ಕಟ್ಟಿಕೊಡುತ್ತಾರೆ. ಕಥೆ ಹೇಳುವ ಅಥವಾ ಆತ್ಮ ಕಥನ ಬರೆಯುವ ಅಥವಾ ಭಾವಲಹರಿ ಹರಿಸುವ ಹೀಗೆ ಸಾಹಿತ್ಯದ ಹೆಚ್ಚಿನೆಲ್ಲಾ ಪ್ರಕಾರಗಳನ್ನು ಅಂಕಣ ಸಾಹಿತ್ಯದಲ್ಲಿ ಸೇರಿಸಿಕೊಂಡು ಓದುಗರಿಗೆ ಅಪೂರ್ವ ಮಾಹಿತಿಗಳನ್ನು ಒದಗಿಸಿಕೊಡುವುದು ಅಂಕಣ ಬರಹಗಳ ವಿಶಿಷ್ಟತೆಯಾಗಿದೆ. ಇಪ್ಪತ್ತನೆಯ ಶತಮಾನದಲ್ಲಿ ಒಂದು ಗಂಭೀರ ಸಾಹಿತ್ಯದ ಪ್ರಕಾರವಾಗಿ ಬೆಳೆದು ಬಂದಿರುವ ಅಂಕಣ ಬರಹಗಳ ಪ್ರಕಾರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಿಸರಗಳಿಗೆ ಒಳಗಾಗುತ್ತಾ ಬದಲಾದ ಕಾಲಮಾನದಲ್ಲಿ ಹೊಸ ಮಾರ್ಗಗಳನ್ನು ಗುರುತಿಸುತ್ತಾ ಕಾಲದ ಅಗತ್ಯಗಳಿಗೆ ತಕ್ಕಂತೆ ಹೊಸ ನಿಲುವುಗಳನ್ನು ಅಭಿವ್ಯಕ್ತಿಸುತ್ತಿರುವುದು ಕಂಡು ಬರುತ್ತದೆ. ೨೦ನೇ ಶತಮಾನದ ಆರಂಭದಲ್ಲಿ ಕಾಣಿಸಿಕೊಳ್ಳತೊಡಗಿದ ಅಂಕಣ ಪ್ರಕಾವು ಕನ್ನಡ ಪತ್ರಿಕೋಧ್ಯಮದ ಆರಂಭದ ದಿನಗಳಲ್ಲಿ ೧೮೪೩ರ ಕಾಲಕ್ಕೆ ಪತ್ರಿಕೆಗಳಲ್ಲಿ ಪ್ರಕಟಣೆಗೊಳ್ಳತೊಡಗಿದವು. ಸ್ವಾತಂತ್ರ ಚಳುವಳಿಯ ಸಂದರ್ಭದಲ್ಲಿ ಸಂಗ್ರಾಮದ ಗುರಿ, ಉದ್ದೇಶಗಳು ಜನರನ್ನು ತಲುಪಲು ಸಹಕಾರಿಯಾದವು. ಇತ್ತೀಚಿನ ದಶಕಗಳವರೆಗೂ ಅಂಕಣ ಬರಹಗಳು ಪುಸ್ತಕರೂಪದಲ್ಲಿ ಪ್ರಕಟಗೊಂಡಿರುವುದು ತೀರಾಕಡಿಮೆ, ಹಾಗಾಗಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಸಮಕಾಲೀನ ಸಂದರ್ಭಗಳಿಗಷ್ಟೇ ಅಂಕಣ ಬರಹಗಳು ಪ್ರಸ್ತುತ ಎಂಬ ಭಾವನೆಯೇ ಸಾಮಾನ್ಯವಾಗಿತ್ತು. ಆದರೆ ಅಂತಹ ಬರಹಗಳು ಪುಸ್ತಕ ರೂಪದಲ್ಲಿ ಸಂಕಲನ ಗೊಂಡು, ಹೊರಬರತೊಡಗಿದಾಗಲೇ ಅಂಕಣ ಬರಹಗಳ ಸಾಹಿತ್ಯದ ಮೌಲ್ಯ ಅರಿವಾಗತೊಡಗಿದವು. ಬಹುಶಃ ೮೦ರ ದಶಕದವರೆಗೆ ವಿರಳವಾಗಿ ಪ್ರಕಟವಾಗುತ್ತಿದ್ದ ಅಂಕಣ ಬರಹಗಳು ೯೦ರ ದಶಕದವೇಳೆಗೆ ವಿಫುಲವಾಗಿ ಬರತೊಡಗಿದವು. ಅದರೊಂದಿಗೆ ಬರಹಗಳ ಭಾಷೆ, ನುಡಿಗಟ್ಟು ಇವುಗಳಲ್ಲೂ ವೈವಿಧ್ಯತೆ ಕಾಣಿಸತೊಡಗಿತು. ನವೋದಯ ಸಾಹಿತ್ಯ ಚರಿತ್ರೆಯ ಆರಂಭದಲ್ಲಿಯೇ ನವೋದಯ ಸಾಹಿತ್ಯದ ಹಿರಿಯರನೇಕರು ಅಂಕಣಗಳನ್ನು ಬರೆಯಲು ಪ್ರಾರಂಭಿಸಿದರು. ಅವು ಸಂಪುಟಗಳಾಗಿಯೂ ಹೊರಬಂದು, ಹೊಸದೊಂದು ಸಾಹಿತ್ಯ ಪ್ರಕಾರಕ್ಕೆ ನಾಂದಿಯಾಯಿತು. ಕಡೆಂಗೋಡ್ಲು ಶಂಕರಭಟ್ಟರು, ಹುರುಳಿ ಭೀಮರಾಯರು, ಬೆಟಗೇರಿ ಕೃಷ್ಣಶರ್ಮರು ಮಹತ್ವ ಪೂರ್ಣ ಬರಹಗಳ ಮೂಲಕ ಈ ಪ್ರಕಾರಕ್ಕೆ ಸಾಹಿತ್ಯದ ಸಿಂಚನ ನೀಡಿದರು, ಸಿದ್ದವನಹಳ್ಳಿ ಕೃಷ್ಣಶರ್ಮರ ಬರಹಗಳು ಅಂಕಣ ಸಾಹಿತ್ಯಕ್ಕೆ ತನ್ನದೇ ಆದ ನೆಲೆಬೆಲೆಯನ್ನು ತಂದುಕೊಟ್ಟವು. ಹೀಗೆ ಅಂಕಣ ಬರಹಗಳು ಸಾಹಿತ್ಯದ ಮೆರಗನ್ನು ಪಡೆದು ಕೊಂಡು ೧೯೨೭-೫೩ರ ಅವಧಿಯಲ್ಲಿ ವಿಷಯ ವೈವಿಧ್ಯತೆಯ ಜೊತೆಗೆ ವಿಚಾರ ಪ್ರತಿಪಾದನೆಯ ದೃಷ್ಟಿಯಿಂದಲೂ ಮಂಥನಕ್ಕೊಳಪಟ್ಟು ಮಹತ್ವ ಪಡೆದುಕೊಂಡಿರುವುದನ್ನು ಕಾಣುತ್ತೇವೆ. ೧೯೨೭ ರಿಂದ ರಾಷ್ಟçಬಂಧು ಪತ್ರಿಕೆಗೆ ಅಂಕಣ ಬರೆಯುತ್ತಿದ್ದ ಕಡೆಂಗೋಡ್ಲು ಶಂಕರಭಟ್ಟರ ಆಯ್ದ ಬರಹಗಳು ಕಡೆಂಗೋಡ್ಲು ಅಗ್ರಲೇಖನಗಳು‘ ಎಂಬ ಸಂಪುಟದಲ್ಲಿ ಸಂಕಲನಗೊಂಡು ಪ್ರಕಟವಾಗಿವೆ. ಇಲ್ಲಿನ ಓಟ್ಟು ಬರಹಗಳನ್ನು ರಾಜಕೀಯ, ವ್ಯವಸಾಯ, ಸಾಮಾಜಿಕ ಸಮಸ್ಯೆಗಳು, ಶಿಕ್ಷಣಕ್ಷೇತ್ರ, ಭಾಷೆ, ಸಾಹಿತ್ಯ, ಪತ್ರಿಕೋದ್ಯಮ ಹೀಗೆ ವರ್ಗೀಕರಿಸಿಕೊಂಡು ವಿವರಿಸಲಾಗಿದೆ. ಸಿದ್ಧವನಹಳ್ಳಿ ಕೃಷ್ಣಶರ್ಮರು, ಮಾತಿನಮಂಟಪ’. ಕನ್ನಡದ ಕಣ’ ಶೀರ್ಷಿಕೆಯಲ್ಲಿ ಬರೆದು ಅಂಕಣ ಸಾಹಿತ್ಯಕ್ಕೆ ನಿರ್ಧಿಷ್ಟರೂಪವನ್ನು ತಂದುಕೊಟ್ಟಿದ್ದಾರೆ. ಕು.ಶಿ. ಹರಿದಾಸಭಟ್ಟರು, ನಿರಂಜನರು, ಹಾ. ಮಾ. ನಾಯಕ ಮುಂತಾದವರು ಅಂಕಣಗಳನ್ನು ಬರೆಯಲು ಪ್ರಾರಂಭಿಸಿದರಿಂದಾಗಿ ಅಂಕಣ ಬರವಣಿಗೆಗಳು ಪತ್ರಿಕಾ ಕ್ಷೇತ್ರದ ಪ್ರಸ್ತುತೆಯ ಜೊತೆಗೆ ಸಾಹಿತ್ಯ ಕ್ಷೇತ್ರದ ಶಾಶ್ವತತೆಯನ್ನು ಮೈಗೂಡಿಸಿಕೊಳ್ಳುವಂತಾಯಿತು’. (ದೇ ಜ ಗೌ ಸಂಪುಟ, ಪುಟ-೪೨೮) ಜೆ.ಪಿ. ರಾಜರತ್ನಂರವರಂತಹ ಹಿರಿಯ ಸಾಹಿತಿಗಳು ಅಂಕಣ ಬರಹಗಳ ಮೂಲಕ ವ್ಯಕ್ತಿತ್ವ ವಿಕಸನ ಮೂಡಿಸುವಂತಹ ಕಾರ್ಯವನ್ನು ಮಾಡುತ್ತಿದ್ದರು. ಸಾಹಿತ್ಯದ ಅಭಿರುಚಿಯನ್ನು ಬಿಂಬಿಸುತ್ತದ್ದ ಬೌದ್ಧ, ಜೈನ ಸಾಹಿತ್ಯಗಳ ಕಥೆಗಳನ್ನು ಇತರ ಧರ್ಮಗಳ ಬೋಧಪ್ರದ ಕಥೆಗಳನ್ನು ಓದುಗರಿಗೆ ಪರಿಚಯಿಸಿದರು. ಅಂಕಣ ಬರಹಗಳಿಗೆ ದೊಡ್ಡರಂಗೇಗೌಡರ ಸಾಹಿತ್ಯ ಪರಿಧಿ’, ರಾಜರತ್ನಂರವರ ವಿಚಾರರಶ್ಮಿ’ ಅಂಕಣಗಳು ಸಾಹಿತ್ಯದ ಸಿಂಚನ ಒದಗಿಸಿವೆ. ಪಾ. ವೆಂ. ಆಚಾರ್ಯರ ವಿಡಂಬನಾತ್ಮಕ ಹಾಗೂ ವಿನೋದಾತ್ಮಕ ಬರವಣಿಗೆಗಳು, ವಿಶ್ವಕರ್ನಾಟಕದಲ್ಲಿ ತಿರುಮಲೆ ತಾತಾಚಾರ್ಯರ 'ಬಡಬೋರೆಗೌಡ' ಎಂಬ ಅಂಕಣಗಳು ಸಾಹಿತ್ಯಿಕ ಮೌಲ್ಯಗಳು ಹೆಚ್ಚಾಗಿದ್ದರಿಂದ ಅಂಕಣ ಸಾಹಿತ್ಯಕ್ಕೆ ಹೊಸ ಮೆರಗು ತಂದು ಕೊಟ್ಟವು. ನವೋದಯ ಆದ್ಯ ಬರಹಗಾರ್ತಿಯರಾದ ತಿರುಮಲಾಂಬ, ಕಲ್ಯಾಣಮ್ಮ, ಸ್ವತಃ ತಮ್ಮದೇ ಪತ್ರಿಕೆಗಳನ್ನು ಹೊರತಂದು ಅಂಕಣಗಳನ್ನು ಬರೆದು, ಇತರ ಮಹಿಳೆಯರಿಗೂ ಬರೆಯಲು ಪ್ರೇರೇಪಿಸಿ ಸಾಹಿತ್ಯಾಭಿರುಚಿಯನ್ನು ವೃದ್ಧಿಸಿಕೊಳ್ಳಲು ಪ್ರೋತ್ಸಾಹಿಸಿದ್ದಾರೆ. ತಿರುಮಲಾಂಬ ಸತಿಹಿತೈಷಿಣಿ’ ಎಂಬ ತಮ್ಮದೇ ಆದ ಗ್ರಂಥಮಾಲೆಯನ್ನು ಸ್ಥಾಪಿಸಿ, ಸ್ವತಃ ಅಂಕಣ ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಕರ್ನಾಟಕ ನಂದಿನಿ ಮಾಸಪತ್ರಿಕೆಯನ್ನು ಪ್ರಾರಂಭಿಸಿ, ಈ ಪತ್ರಿಕೆಯಲ್ಲಿ ಕನ್ನಡದ ರನ್ನಗನ್ನಡಿ' ಎಂಬ ಒಂದು ಪುಟಗಳ ಅಂಕಣವನ್ನು ಕನ್ನಡದ ಕೈಂಕರ್ಯ ನಡೆಸಿದವರಿಗಾಗಿಯೇ ಮೀಸಲಾಗಿರಿಸಿದ್ದರು. ಸರಸ್ವತಿ ಪತ್ರಿಕೆ ಆರಂಭಿಸಿದ ಕಲ್ಯಾಣಮ್ಮ, ಸರಸ್ವತಿ ಪತ್ರಿಕೆಯ ನಮ್ಮ ನುಡಿಗನ್ನಡಿ’ ಅಂಕಣದಲ್ಲಿ ಪ್ರಕಟವಾದ ಮಾತೆಯರು ವಾಚನಾಭಿರುಚಿಯೂ' ಶೀರ್ಷಿಕೆಯ ಲೇಖನದಲ್ಲಿ ಮಹಿಳೆಯರ ಸಾಹಿತ್ಯ ಆಸಕ್ತಿ ಮತ್ತು ಅವರಿಗೆ ಬೇಕಾದ ಬೆಂಬಲದ ಕುರಿತು ಚರ್ಚಿಸಿ, "ನಮ್ಮ ಅನೇಕ ಅಕ್ಕತಂಗಿಯರಿಗೆ ವಾಚನಾಭೀರುಚಿಯೇನೋ ಇದೆ, ಅದು ಪೂರ್ಣವಾಗಿಲ್ಲ ಕಾರಣ ಕನ್ನಡ ಸಾಹಿತ್ಯದ ಸಮಾಜವು ಅವರಿಗೆ ತಕ್ಕ ಅನುಕೂಲಗಳನ್ನು ಕಲ್ಪಿಸಿಕೊಡಲಿಲ್ಲ. ಹಿಂದಿಭಾಷೆಯಲ್ಲಿ ಮಾಸಪತ್ರಿಕೆ ಚಾಂದ್' ಸ್ತ್ರೀ ಸಾಹಿತ್ಯಮಯಿ ಪತ್ರಿಕೆಯ ನೂರಾರು ಸಂಚಿಕೆಗಳು ವರ್ಷಾಂಪ್ರತಿ ಧರ್ಮಾರ್ಥವಾಗಿ ಹಂಚಲ್ಪಡುತ್ತವೆ. ಅದು ಆ ಓದುಗ ಮಹಿಳೆಯರ ವಾಚನಾಭಿರುಚಿಯನ್ನು ಹೆಚ್ಚಿಸಿದೆ. ಕನ್ನಡ ಸಾಹಿತ್ಯದಲ್ಲಿ ಅಂತಹ ಮಾರ್ಪಾಡಾಗುವುದೋ” ತಿಳಿಯದು ಎಂಬ ಖಿನ್ನತೆಯನ್ನು ವ್ಯಕ್ತಪಡಿಸಿದ್ದಾರೆ. (ಸರಸ್ವತಿ ಪತ್ರಿಕೆ, ಸಂಪಾದಕೀಯ ಅಂಕಣ, ಸಂಚಿಕೆ-೧. ಸಂಪುಟ-೨೯, ನವೆಂಬರ್ ೧೯೪೯.) ಸಾಹಿತ್ಯ ಸಾಂಸ್ಕೃತಿಕ ಆಗುಹೋಗುಗಳ ವರದಿಯಂತೆ ಪ್ರಕಟವಾಗಿ ಸರಸ್ವತಿ ಪತ್ರಿಕೆಯ ನಮ್ಮ ನುಡಿಗನ್ನಡಿ' ಅಂಕಣವು ಕುತೂಹಲಕರ ಅಂಶಗಳನ್ನು ಒದಗಿಸುತ್ತಿತ್ತು. `ಸಾಹಿತ್ಯವನ್ನಾಗಲಿ, ಚರಿತ್ರೆಯನ್ನಾಗಲಿ, ಸಾಮಾಜಿಕ ರಚನೆಯನ್ನಾಗಲಿ ಹೊಸ ದೃಷ್ಟಿಕೋನದಿಂದ ವೀಕ್ಷಿಸಿದಾಗ ಅವುಗಳ ಸ್ವರೂಪವೇ ಬದಲಾಗುತ್ತದೆ.’ ಎನ್ನುವಂತೆ ನಂತರದ ಪ್ರಗತಿಶೀಲ ತಲೆಮಾರಿನಲ್ಲಿ ಪ್ರಗತಿಪರ ಚಿಂತನ ನೆಲೆಯಿಂದ ವಿಶ್ಲೇಷಣೆಗೊಂಡ ಹೊಸ ದೃಷ್ಟಿಕೋನಗಳ ನಿರಂಜನರು, ವ್ಯಾಸರಾಯ ಬಲ್ಲಾಳರು, ಗೌರೀಶ ಕಾಯ್ಕಿಣಿ, ಚಂದ್ರಶೇಖರ ಪಾಟೀಲರು, ಎಚ್.ಎಸ್.ಕೆ. ಮೊದಲಾದವರು ಬರಹಗಳು ಗಮನಸೆಳೆದವು. ಹೊಸ ದೃಷ್ಟಿಕೋನಗಳ ನಿರಂಜನರ ಬರಹಗಳಲ್ಲಿ ಮೊದಲ ಅಂಕಣ ೧೯೬೫ರಲ್ಲಿ ಪ್ರಜಾಮತ ವಾರಪತ್ರಿಕೆಯ ಸಾಪ್ತಾಹಿಕದಲ್ಲಿ ಸರೂ ಕೇಳಿದೆಯಾ' ಎಂಬ ಶೀರ್ಷಿಕೆಯಲ್ಲಿ ಪ್ರಾರಂಭವಾಗಿ, ನಂತರದ ದಿನಗಳಲ್ಲಿ ಉಷಾ’ ಪತ್ರಿಕೆಯಲ್ಲಿ ಸರೋಜ ಸಂಚಯ', ಜನಶಕ್ತಿ ಪತ್ರಿಕೆಯಲ್ಲಿ 'ಸಾಧನ ಸಂಚಯ' ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಳ್ಳುತ್ತಿದ್ದವು. ಹಾಗೂ ಚಿತ್ರಗುಪ್ತ'ದಲ್ಲಿ ಪ್ರಶ್ನೋತ್ತರ ಅಂಕಣ ಓದುಗರೊಡನೆ ಐದು ನಿಮಿಷ ಹಾಗೂ ಕಾಲಕ್ಷೇಪ, ಸಾಹಿತ್ಯ ಸಮೀಕ್ಷೆ ಆನಂತರ ಪ್ರಜಾವಾಣಿ ಪತ್ರಿಕೆಯಲ್ಲಿ ಬೇವು ಬೆಲ್ಲ ಮತ್ತು ಕರ್ಮವೀರ’ ದಲ್ಲಿ ರಾಜಧಾನಿಯಿಂದ' ಹೀಗೆ ವಿವಿಧ ಶೀರ್ಷಿಕೆಯಲ್ಲಿ ಸುಮಾರು ಎರಡು ಸಾವಿರದಷ್ಟು ಅಂಕಣಗಳನ್ನು ಬರೆದು ದಾಖಲೆ ನಿರ್ಮಿಸಿದ್ದಾರೆ. “ನಿರಂಜನರ ಅಂಕಣಗಳು ಅವರ ವ್ಯಕ್ತಿತ್ವ, ಮನೋಧರ್ಮಗಳಲ್ಲಾದ ವಿಕಸನದ ಹಲವು ಹಂತಗಳ ದಿಕ್ಸೂಚಿ ಮಾತ್ರವಲ್ಲ, ಆಧುನಿಕ ಸಾಹಿತ್ಯ ಚಿಂತನಕಾರರಿಗೆ ಸಮೃದ್ಧ ಆಕರ” ಎಂದು ಹೇಳಲಾಗಿದೆ. (ಹೊಸಗನ್ನಡ ಸಾಹಿತ್ಯ ರೂಪಗಳು. ಪು-೧೮೬) ಕೀರ್ತಿನಾಥ ಕುರ್ತುಕೋಟಿಯವರ ಅಂಕಣ ಬರಹಗಳಲ್ಲಿ ಮುಖ್ಯವಾಗಿ ಸಾಹಿತ್ಯ-ಸಂಸ್ಕೃತಿ ಕುರಿತ ಚಿಂತನೆಗಳನ್ನು ಕಾಣುತ್ತೇವೆ. ಅವರು ಸಮ್ಮುಖ ಎಂಬ ಶೀರ್ಷಿಕೆಯಲ್ಲಿ ಪ್ರಜಾವಾಣಿ ಪತ್ರಿಕೆಗೆ ಬರೆಯುತ್ತಿದ್ದ ಅಂಕಣ ಬರಹಗಳು `’ಉರಿಯ ನಾಲಗೆ” ಎಂಬ ಪು

Fields of Study & Subjects

Literature: history themes analysis Literary Analysis and Cultural Studies Contemporary Literature and Criticism

Publication details

Journal / source
Zenodo (CERN European Organization for Nuclear Research)
Publication date
1 March 2026
Language
KN