Abstract
ಕರ್ನಾಟಕದ ಸಾಹಿತ್ಯ ಮತ್ತು ಐತಿಹಾಸಿಕತೆಯ ರಚನೆಗೆ ಶಾಸನಗಳ ಕೊಡುಗೆ ಅಪಾರವಾದುದಾಗಿದೆ. 'ಶಾಸನ' ಎಂದರೆ ಶಾಶ್ವತವಾಗಿ ಉಳಿಯುವಂತಹ ವಸ್ತುಗಳ ಮೇಲೆ ಕೊರೆಯಲಾದ ಬರಹಗಳಾಗಿವೆ. ಅಂದಿನ ಅರಸುಗಳು ತಾವು ಮಾಡುವ ಆಜ್ಞೆಗಳು ಬಹುಕಾಲ ಉಳಿಯುವಂತಾಗಬೇಕು ಮತ್ತು ತಮ್ಮ ಕೀರ್ತಿ-ಪ್ರತಿಷ್ಠೆಗಳು ಹೆಚ್ಚು ಕಾಲದವರೆಗೆ ಜಗತ್ತಿಗೆ ತಿಳಿಯುವಂತಾಗಬೇಕು ಎಂಬ ಉದ್ದೇಶವನ್ನು ಹೊಂದಿದ್ದರು. ಆದ್ದರಿಂದ ಶಾಸನಗಳನ್ನು ಹಾಕಿಸುವ ರೂಢಿಯನ್ನು ಬೆಳೆಸಿದರು. ಸಾಮ್ರಾಟ ಅಶೋಕ ಈ ಸಾಲಿನಲ್ಲಿ ಬರುವ ಮೊದಲ ಅರಸ. ಆತನ ನಂತರ ಬಂದಂತಹ ಅರಸರುಗಳು ಅವನನ್ನು ಅನುಸರಿಸಿ ವ್ಯಾಪಕವಾಗಿ ಶಾಸನಗಳನ್ನು ಹಾಕಿಸಿದ್ದನ್ನು ಕಾಣಬಹುದಾಗಿದೆ. ಶಾಸನಗಳನ್ನು ಅಧ್ಯಯನ ಮಾಡಿದವರಲ್ಲಿ ಪಾಶ್ಚಾತ್ಯರು ಮೊದಲಿಗರು. ಅವರ ಶ್ರಮದಿಂದ ಕರ್ನಾಟಕದಲ್ಲಿ ದೊರಕಿರುವ ಅಸಂಖ್ಯಾತ ಶಾಸನಗಳಲ್ಲಿ 'ದಾನ ಶಾಸನ'ಗಳು ಹೆಚ್ಚಾಗಿವೆ. ಅವುಗಳನ್ನು ನಕಲು ತೆಗೆದು, ಓದುವ ಮೂಲಕ ಪಾಠಗಳನ್ನು ರಚಿಸಿ, ಸಂರಕ್ಷಿಸಿ ಇಡುವ ಕಾರ್ಯವನ್ನು ಅವರು ಕೈಗೊಂಡಿದ್ದರಿಂದ ಇಂದು ಶಾಸನಗಳು ನಮ್ಮ ಅಧ್ಯಯನಕ್ಕೆ ಸಾವಕಾಶವಾಗಿ ದೊರೆಯುತ್ತವೆ. ಕೇವಲ ಪಾಶ್ಚಾತ್ಯ ವಿದ್ವಾಂಸರಷ್ಟೇ ಅಲ್ಲದೇ ನಮ್ಮ ಕನ್ನಡದ ಅನೇಕ ಸಂಶೋಧಕರು ಈ ಶಾಸನ ಸಂರಕ್ಷಣೆಯ ಕಾರ್ಯದಲ್ಲಿ ಸಾಕಷ್ಟು ತೊಡಗಿಸಿಕೊಂಡಿದ್ದಾರೆ. ಅಂತಹವರುಗಳಲ್ಲಿ ಹೆಸರಿಸಬಹುದಾದ ಪ್ರಮುಖ ಸಂಶೋಧಕರೆಂದರೆ ಡಾ. ಎಂ. ಚಿದಾನಂದಮೂರ್ತಿಯವರು. ಇವರಂತೆ ಹಲವಾರು ಕನ್ನಡ ವಿದ್ವಾಂಸರು ಶಾಸನಾಧ್ಯಯನದ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಅನ್ವೇಷಣೆಗಳಿಗೆ ಕಾರಣೀಕರ್ತರಾಗಿದ್ದಾರೆ. ಶಾಸನ ಕ್ಷೇತ್ರದಲ್ಲಿ ಆಗಿರುವಂತಹ ಇತ್ತೀಚಿನ ಸಂಶೋಧನೆಗಳ ನೆಲೆಯಲ್ಲಿ 'ಪ್ರೊ. ಎಂ. ಜಿ. ಮಂಜುನಾಥ' ಅವರ ಸಂಶೋಧನೆಗಳು ಬಹುಮುಖ್ಯವಾದವು. ಇವರು ಕನ್ನಡದ ಅನೇಕ ಶಾಸನಗಳಲ್ಲಿ ಇತಿಹಾಸ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಹೊಸ ವಿಚಾರಗಳನ್ನು ಪತ್ತೆ ಹಚ್ಚುವ ಮೂಲಕ ಸಂಶೋಧನಾ ಕ್ಷೇತ್ರದ ಗಮನ ಸೆಳೆದಿದ್ದಾರೆ. ಶಾಸನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅವರು ರಚಿಸಿರುವ ಕೃತಿಗಳು ಇದಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ. ನಿಸಿದಿ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ವೈಶಿಷ್ಟ್ಯ ಪೂರ್ಣ ಕನ್ನಡ ಶಾಸನಗಳು, ಶಾಸನ ಪರಿಶೋಧನೆ, ಕನ್ನಡ ಪ್ರಾಚೀನ ಶಾಸನಗಳು, ಮಾಸ್ತಿಕಲ್ಲು ವೀರಗಲ್ಲು ಮತ್ತು ನಿಸಿದಿ ಶಾಸನಗಳು, ಯಲಹಂಕ ನಾಡ ಪ್ರಭುಗಳ ಶಾಸನ ಸಂಪುಟ, ಹೊಂಬುಜ ಶಾಸನಗಳು, ಮಾಧ್ವ ಮಠಗಳ ಶಾಸನ ಸಂಪುಟ-1 ಮತ್ತು ಸಂಪುಟ-2 ಮುಂತಾದ ಶಾಸನ ಸಂಬಂಧಿತ ಕೃತಿಗಳನ್ನು ರಚಿಸಿದ್ದಾರೆ. ಈ ಕೃತಿಗಳ ಮೂಲಕ ಶಾಸನ ಕ್ಷೇತ್ರದ ಸಂಶೋಧನೆಯಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದ್ದಾರೆ. 'ಹಲ್ಮಡಿ ಶಾಸನ'ದಿಂದ ಎಂ. ಜಿ. ಮಂಜುನಾಥ ಅವರ ಸಂಶೋಧನೆಗಳನ್ನು ಗುರುತಿಸಬಹುದಾಗಿದೆ. ಈ ಶಾಸನದಲ್ಲಿ 'ಕುರುಂಬಿಡಿ' ಎಂಬ ಪದವು ಬಂದಿದೆ. ಈ ಪದವನ್ನು ಕುರಿತು ಡಾ. ಎಂ. ಹೆಚ್. ಕೃಷ್ಣ ಅವರು ತಮ್ಮ ಅಭಿಪ್ರಾಯವನ್ನು ಈ ರೀತಿಯಾಗಿ ಮಂಡಿಸಿದ್ದಾರೆ. ಕುರುಂಬಿಡಿ ಎಂದರೆ ಒಂದು ಸಣ್ಣ ತೆರಿಗೆ, ಪ್ರಾಯಶಃ 'ನೀರಿನ ತೆರಿಗೆ' ಇರಬಹುದು ಎಂದು ಹೇಳಿದ್ದಾರೆ. ಆದರೆ ಇದೇ ವಿಷಯದ ಕುರಿತು ಎಂ. ಜಿ. ಮಂಜುನಾಥ ಅವರು ನಡೆಸಿದ ಅಧ್ಯಯನದಲ್ಲಿ 'ಕುರುಂಬ' ಎಂದರೆ 'ದುರ್ಗದ ರಕ್ಷಕ' ಎಂಬರ್ಥ ಮತ್ತು 'ಕುರುಂಬಿಡಿ' ಎಂದರೆ 'ದುರ್ಗದ ರಕ್ಷಕನಿಗೆ ಸಲ್ಲಬೇಕಾದ ತೆರಿಗೆ' ಎಂಬ ಅರ್ಥ ಬರುತ್ತದೆ1 ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಪದದಲ್ಲಿರುವ 'ಬಿಡಿ' ಎಂಬ ಪದಕ್ಕೆ ಶಾಸನಗಳಲ್ಲಿ ಬಿಡಿಗೆ, ಬೆಡುಗೆ, ಬೇಡಿಗೆ ಎಂಬ ಸಮೀಪದ ಅರ್ಥವಿರುವ ಶಬ್ದರೂಪಗಳು 'ತೆರಿಗೆ' ಎಂಬ ಅರ್ಥದಲ್ಲಿ ಪ್ರಯೋಗವಾಗಿರುವುದು ಕಂಡುಬಂದಿದೆ. ಹಲ್ಟಿಡಿ ಮತ್ತು ಮೂಳಿವಳ್ಳಿಗಳನ್ನು ಬಾಳಚ್ಚು ಎಂದು ಮೃಗೇಶ ಮತ್ತು ನಾಗರಿಂದ ಪಡೆದ ವಿಜಅರಸನು ಅವುಗಳನ್ನು ರಕ್ಷಿಸುವ ಹೊಣೆಯನ್ನು ಹೊತ್ತಿದ್ದನು. ಆದ್ದರಿಂದ ಹಲ್ಮಡಿಯ ರಕ್ಷಣೆಗಾಗಿ ತೆರಿಗೆಯನ್ನು ಸಂಗ್ರಹಿಸುವ ಅಧಿಕಾರವನ್ನು ಹೊಂದಿದ್ದನು. ಮೃಗೇಶ, ನಾಗ ಮತ್ತು ವಿಜಅರಸ ಮೂವರು ಸೇರಿ ಹಲ್ಮಡಿಗೆ ಕುರುಮಿಡಿಯನ್ನು ಅಂದರೆ ದುರ್ಗದ ರಕ್ಷಕನಿಗೆ ಸಲ್ಲಬೇಕಾದ ತೆರಿಗೆಯನ್ನು ರದ್ದುಪಡಿಸಿದ್ದನ್ನು ಶಾಸನವು ಉಲ್ಲೇಖಿಸಿದೆ. ಕುರುಂಬಿಡಿ ಪದವು ಬಹುಕಾಲದವರೆಗೆ ಚರ್ಚೆಗೆ ಗ್ರಾಸವಾಗಿತ್ತು. ಪ್ರಾಚೀನ ಶಾಸನ ತಜ್ಞರು ನೀಡಿದ ಅರ್ಥಗಳು ಮತ್ತು ಸಂಶೋಧನಾ ಕಾರ್ಯ ಮುಂದುವರೆದಂತೆ ಆಧುನಿಕ ಶಾಸನ ತಜ್ಞರು ನೀಡಿದ ಹೊಸ ಶೋಧನೆಗಳಲ್ಲಿ ಕನ್ನಡ ನಾಡಿನ ಗತಕಾಲದ ಸಾಮಾಜಿಕ ಇತಿಹಾಸದ ಕುರಿತ ಹೊಸ-ಹೊಸ ಅಂಶಗಳು ಪತ್ತೆಯಾಗುತ್ತಿರುವುದು ಕಂಡುಬರುತ್ತದೆ. ಈ ಶಾಸನದಲ್ಲಿ ಹಲ್ಟಿಡಿ ಮತ್ತು ಮೂಳಿವಳ್ಳಿ ಗ್ರಾಮಗಳು ದೊರೆತ ಕೆಲವು ವರ್ಷಗಳ ನಂತರ ವೇದ ಪಾರಂಗತರಾಗಿದ್ದ ಬ್ರಾಹ್ಮಣರಿಗೆ ಭೂಮಿಯನ್ನು ವಿಜಅರಸನು ದಾನವಾಗಿ ನೀಡಿದ್ದರಿಂದ ಈ ಶಾಸನದ ಕೊನೆಯ ಸಾಲನ್ನು ಅನಂತರದ ಕಾಲಘಟ್ಟದಲ್ಲಿ ಬರೆಯಿಸಲಾಗಿದೆ. ಆದ್ದರಿಂದ ಈ ಸಾಲಿನ ಲಿಪಿ ಸ್ವರೂಪವು ಶಾಸನದ ಉಳಿದ ಸಾಲುಗಳ ಲಿಪಿ ಸ್ವರೂಪಕ್ಕಿಂತ ಭಿನ್ನವಾಗಿದೆ2. ಲಿಪಿಗಳ ಸ್ವರೂಪಗಳಲ್ಲಿ ಕಂಡುಬರುವಂತಹ ಬದಲಾವಣೆಗಳು ಕಾಲ-ಕಾಲಕ್ಕೆ ವಿಭಿನ್ನತೆಯನ್ನು ಪಡೆದುಕೊಳ್ಳುತ್ತಾ ಹೋಗುತ್ತವೆ. ಲಿಪಿಗಳು ಚಲನಶೀಲವಾಗಿದ್ದು ಮತ್ತು ನಿರಂತರವಾಗಿ ಬದಲಾವಣೆಗಳಿಗೆ ಒಳಪಡುತ್ತವೆ. ಹೊಸರೂಪಗಳನ್ನು ಪಡೆದುಕೊಳ್ಳುತ್ತವೆ. ಆರಂಭದ ಲಿಪಿ ತಜ್ಞರು ಅದನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಿರಬಹುದು. ನಂತರ ಮುಂದುವರೆದ ತಂತ್ರಜ್ಞಾನಗಳು ಬಂದಂತಹ ಸಂದರ್ಭದಲ್ಲಿ ಹೆಚ್ಚು ನಿಷ್ಣಾತರಾದ ಲಿಪಿ ತಜ್ಞರು ಲಿಪಿಗಳ ರಚನೆಗಳನ್ನು ಪತ್ತೆ ಹಚ್ಚಿ ಹೊಸ ವಿಷಯಗಳನ್ನು ಆಧುನಿಕ ಜಗತ್ತಿಗೆ ತಲುಪಿಸುವಲ್ಲಿ ಯಶಸ್ವಿಯಾದರು. ಎಂ. ಜಿ. ಮಂಜುನಾಥ ಅವರ ಕಾರ್ಯಗಳನ್ನು ಈ ನೆಲೆಯಲ್ಲಿ ಗುರುತಿಸಲಾಗಿದೆ. ಶ್ರವಣಬೆಳಗೊಳದ 'ಗುಣಭೂಷಿತ ಮುನಿಯ ಶಾಸನ'ದಲ್ಲಿ ಪ್ರಮುಖವಾಗಿ ಭಾಷೆಗೆ ಸಂಬಂಧಿಸಿದಂತೆ ವಿಶೇಷತೆಯನ್ನು ಪತ್ತೆಹಚ್ಚಿದ್ದಾರೆ. ಹಲ್ಮಡಿ ಶಾಸನದಲ್ಲಿ ಪೂರ್ವದ ಹಳಗನ್ನಡ ಮತ್ತು ಸಂಸ್ಕೃತ ಭಾಷೆಗಳು ಬಳಕೆಯಾಗಿವೆ. ಆದರೆ ಶ್ರವಣಬೆಳಗೊಳದಲ್ಲಿ ದೊರೆತಿರುವ ಈ ಶಾಸನದಲ್ಲಿ ಕನ್ನಡ ಭಾಷೆಯ ಜೊತೆಗೆ ಪ್ರಾಕೃತ ಭಾಷೆಯು ಬಳಕೆಯಾಗಿರುವುದು ಗಮನಿಸಬೇಕಾದ ಅಂಶವಾಗಿದೆ. ಮೊದಲು ಈ ಶಾಸನದ ಕಾಲವನ್ನು ಕ್ರಿ. ಶ. 700ರ ಕಾಲದ್ದೆಂದು ಗುರುತಿಸಲಾಗಿತ್ತು. ಲಿಪಿಯ ಸ್ವರೂಪದ ದೃಷ್ಟಿಯಿಂದ ಈ ಶಾಸನವು ಹಲ್ಮಡಿ ಶಾಸನಕ್ಕಿಂತ ಹಿಂದಿನ ಶಾಸನವಾಗಿದೆ ಎಂಬುದನ್ನು ಗ್ರಹಿಸಬೇಕು. ಈ ಆಧಾರಗಳ ಸಹಾಯದಿಂದ ಶ್ರವಣಬೆಳಗೊಳದ ಗುಣಭೂಷಿತ ಮುನಿಯ ನಿಸಿದಿ ಶಾಸನವು ಕನ್ನಡದ ಅತ್ಯಂತ ಪ್ರಾಚೀನ ಉಪಲಬ್ಧ ಶಾಸನವೆಂದು ಗುರುತಿಸಲಾಗಿದ್ದು, ಇದರ ಕಾಲ ಸುಮಾರು ಕ್ರಿ. ಶ. 400 ಎಂದು ನಿರ್ಧರಿಸಲಾಗಿದೆ3. ಎಂ. ಜಿ. ಮಂಜುನಾಥ ಅವರು 2001 ರಲ್ಲಿ ಪ್ರಜಾವಾಣಿ ಪತ್ರಿಕೆಗೆ ಬರೆದ 'ಹಲ್ಮಡಿ ಶಾಸನಕ್ಕಿಂತ ಪ್ರಾಚೀನ ಶಾಸನ ಲಭ್ಯವೆ?' ಎಂಬ ಲೇಖನದಲ್ಲಿ ಗುಣಭೂಷಿತ ಮುನಿಯ ಶಾಸನದ ಮೂಲಕ ಶಾಸನಗಳ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯದ ಪ್ರಾಚೀನತೆಯನ್ನು ಇನ್ನೂ ಹಲವು ಶತಮಾನಗಳ ಹಿಂದಕ್ಕೆ ತೆಗೆದುಕೊಂಡು ಹೋಗುವಂತಹ ಹೊಸದೊಂದು ಸಾಧ್ಯತೆಯನ್ನು ತೋರಿಸಿಕೊಟ್ಟಿದ್ದಾರೆ. ತಮ್ಮಟಕಲ್ಲಿನಲ್ಲಿ ದೊರೆತ ಕ್ರಿ. ಶ. 500ರ ಗುಣಮಧುರನ ಶಾಸನದಲ್ಲಿ 'ಗುಣಮಧುರನು ಮಸಿಕ್ಕಾ ಪುರಾಧಿಪತಿ. ಭಾರದ್ವಾಜ ವಂಶದ ಧನಾಗಮನ ಮಗ' ಎಂದು ಸಂಸ್ಕೃತ ಶ್ಲೋಕಗಳಲ್ಲಿ ಶಾಸನದ ಮೇಲೆ ಬರೆಯಲಾಗಿದೆ. ಯುದ್ಧಭೂಮಿಯಲ್ಲಿ ಶತ್ರುಗಳ ವಿರುದ್ಧ ಹೋರಾಡಿ ಮಡಿದ ಗುಣಮಧುರನ ಪ್ರಶಸ್ತಿಯನ್ನು ವೀರಗಲ್ಲು ಶಾಸನದ ರೂಪದಲ್ಲಿ ಕಂಡರಿಸಲಾಗಿದೆ. ಆದ್ದರಿಂದ ಪ್ರಸ್ತುತ ಶಾಸನವನ್ನು ಕರ್ನಾಟಕದ ಅತ್ಯಂತ ಪ್ರಾಚೀನ ಉಪಲಬ್ಧ ವೀರಗಲ್ಲು ಶಾಸನವೆಂದು ಗುರುತಿಸಲಾಗಿದೆ4. ತಮ್ಮಟಕಲ್ಲು ಶಾಸನವು ದೊರೆತ ಕ್ರಿ. ಶ. 700ರ ಕಾಲಮಾನದಲ್ಲಿ ಲಭಿಸಿದ ಅನೇಕ ಶಾಸನಗಳು ಸಾಹಿತ್ಯಕ ಅಂಶಗಳನ್ನು ಒಳಗೊಂಡಿರುವುದು ವಿಶೇಷವಾಗಿದೆ. ಕ್ರಿ. ಶ. 7ನೇ ಶತಮಾನದ 'ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ'ದಲ್ಲಿ ತ್ರಿಪದಿಗಳನ್ನು ಗುರುತಿಸಿರುವುದು ತಿಳಿದಿರುವ ಸಂಗತಿ. ಈ ಶಾಸನವನ್ನು ಹೊರತುಪಡಿಸಿದರೆ ಕ್ರಿ. ಶ. ಸುಮಾರು 800ರ ಕಾಲಘಟ್ಟದ 'ಹೊಂಬುಜ ಶಾಸನ'ವು ನಾಲ್ಕು ತ್ರಿಪದಿಗಳನ್ನು ಹೊಂದಿರುವ ಅಂಶವನ್ನು ಗುರುತಿಸಿದ್ದಾರೆ. ಆದರೆ ಈ ಶಾಸನವು ತುಟಿತವಾಗಿದೆ. ಇದರ ಸಾಕಷ್ಟು ಭಾಗವು ಅಲಭ್ಯವಾಗಿದ್ದು, ಇದರಲ್ಲಿ ಕೇವಲ ಒಂದು ತ್ರಿಪದಿ ಮಾತ್ರ ಸಂಪೂರ್ಣವಾಗಿ ದೊರೆತಿದೆ5. ಪ್ರೊ. ಎಂ. ಜಿ. ಮಂಜುನಾಥ ಅವರ 'ಶಾಸನ ಪರಿಶೋಧನೆ' ಕೃತಿಯು ಅವರು ಶಾಸನಗಳಿಗೆ ಸಂಬಂಧಿಸಿದಂತೆ ಮಾಡಿದ ನವೀನ ಸಂಶೋಧನಾ ಲೇಖನಗಳನ್ನು ಒಳಗೊಂಡಿದೆ. ಈ ಕೃತಿಯಲ್ಲಿ ಬಹು ಚರ್ಚಾಸ್ಪದವಾಗುವಂತಹ ಪ್ರಮುಖ ಅಂಶಗಳನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ಹೊಯ್ಸಳ ದೊರೆ ವಿಷ್ಣುವರ್ಧನನ ಅಂತ್ಯದ ಕಾಲವನ್ನು ಪುನರ್ ಪರಿಶೀಲನೆ ಮಾಡಿದ್ದಾರೆ. ವಿಷ್ಣುವರ್ಧನನು ಕ್ರಿ. ಶ. 1141ರಲ್ಲಿ ಮರಣ ಹೊಂದಿದನು ಎಂದು ಬಿ. ಎಲ್. ರೈಸ್, ವಿಲಿಯಂ ಕೊಯಿಲೊ, ಡಾ. ಎ. ವಿ. ನರಸಿಂಹಮೂರ್ತಿ, ಡಾ. ಎಂ. ವಿ. ಕೃಷ್ಣಸ್ವಾಮಿ ಮತ್ತು ಡಾ. ಸೂರ್ಯನಾಥ ಕಾಮತ್ ಮುಂತಾದವರು ಅಭಿಪ್ರಾಯ ಪಟ್ಟಿದ್ದಾರೆ. ಡೆರೆಟ್ ಅವರು ಈತ ಕ್ರಿ. ಶ. 1142ರಲ್ಲಿ ಸಾವನ್ನಪ್ಪಿದ ಎಂದು ಅಭಿಪ್ರಾಯಪಟ್ಟಿದ್ದಾರೆ. ಇವರಂತೆ ಡಾ. ಬಾ. ರಾ. ಗೋಪಾಲ್, ಡಾ. ಪಿ. ಬಿ. ದೇಸಾಯಿ, ಡಾ. ಕೆ. ನೀಲಕಂಠ ಶಾಸ್ತ್ರಿ, ಪ್ರೊ. ಎಸ್. ಕೆ. ಅಯ್ಯಂಗಾರ್ ಮುಂತಾದವರು ವಿಷ್ಣುವರ್ಧನನು ಕ್ರಿ. ಶ. 1152ರ ವರೆಗೆ ಜೀವಿಸಿದ್ದ ಎಂದು ಹೇಳಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ 'ಹವಳ್ಳಿ ಶಾಸನ'ದಲ್ಲಿ 'ಹಿರಿಯರಸ ಬಿಟ್ಟಿದೇವ ಕಾಲಂಗೆಯ್ಯ ಎಂಬ ಸಾಲಿನಲ್ಲಿ 'ಬಿಟ್ಟಿದೇವ' ಎಂಬ ಪದದ ದಾಖಲೆಯಿಂದ ವಿಷ್ಣುವರ್ಧನನು ಮರಣ ಹೊಂದಿರುವ ಅಂಶವನ್ನು ವಿದ್ವಾಂಸರು ಗುರುತಿಸಿದ್ದಾರೆ. ಆದರೆ ಈ ವ್ಯಕ್ತಿಯು ಅರಸ ವಿಷ್ಣುವರ್ಧನನಾಗಿರದೆ ಬೇರೊಬ್ಬ ವ್ಯಕ್ತಿಯಾಗಿದ್ದಾನೆ ಎಂಬುದು ದೃಢಪಡಿಸಲ್ಪಟ್ಟಿದೆ. ಆದರೆ ಕ್ರಿ. ಶ. 1141ರ ನಂತರವೂ ಈತ ಬದುಕಿದ್ದು ಆಡಳಿತವನ್ನು ಮುಂದುವರೆಸಿದ ಅಂಶವನ್ನು ಗಮನಿಸಬಹುದಾಗಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕೆಲ್ಲಂಗೆರೆಯ ಒಂದು ಶಾಸನವು ಕ್ರಿ. ಶ. 1142ರ ಸಮಯದಲ್ಲಿ, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಕಲಸಗೆರೆಯ ಒಂದು ಶಾಸನವು ಕ್ರಿ. ಶ. 1142ರ ಸಂದರ್ಭದಲ್ಲಿ, ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲ್ಲೂಕಿನ ಬಾಗಳಿಯ ಒಂದು ಶಾಸನವು ಕ್ರಿ. ಶ. 1142ರಲ್ಲಿ, ಅರಸೀಕೆರೆಯ ಕೋಳಿಗುಂದದ ಒಂದು ಶಾಸನವು ಕ್ರಿ. ಶ. 1144ರಲ್ಲಿ, ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಳ್ಳೂರಿನ ಒಂದು ವೀರಗಲ್ಲು ಕ್ರಿ. ಶ. 1145ರ ಕಾಲಘಟ್ಟದಲ್ಲಿ ವಿಷ್ಣುವರ್ಧನನ ಆಳ್ವಿಕೆ ಚಾಲ್ತಿಯಲ್ಲಿತ್ತು ಎಂಬುದನ್ನು ಉಲ್ಲೇಖಿಸಿವೆ. ಈ ಎಲ್ಲಾ ದಾಖಲೆಗಳಿಂದ ವಿಷ್ಣುವರ್ಧನನು ಕ್ರಿ. ಶ. 1148ರ ಅಕ್ಟೋಬರ್ 25 ರವರೆಗೂ ಬದುಕಿದ್ದನೆಂದು ವಿದ್ವಾಂಸರು ಖಚಿತವಾಗಿ ಹೇಳಿದ್ದಾರೆ 6. ಈ ಬಗೆಯಲ್ಲಿ ವಿಷ್ಣುವರ್ಧನನ ಸಾವಿನ ಕಾಲಾವಧಿಯನ್ನು ಪ್ರೊ. ಎಂ. ಜಿ. ಮಂಜುನಾಥ ಅವರು ಖಚಿತವಾದ ಶಾಸನೋಲ್ಲೇಖಗಳನ್ನು ನೀಡುವ ಮೂಲಕ ಮರುಪರಿಶೀಲನೆ ಮಾಡಿದ್ದಾರೆ. ಹೊಯ್ಸಳ ಅರಸರು ತಮ್ಮ ರಾಜಲಾಂಛನವಾಗಿ 'ಸಳನು ಹುಲಿಯನ್ನು ಕೊಲ್ಲುತ್ತಿರುವ ಶಿಲ್ಪ'7ವನ್ನು ಮಾನ್ಯ ಮಾಡಿದ್ದರು ಎಂಬುದು ಐತಿಹಾಸಿಕ ದಾಖಲೆಗಳಿಂದ ತಿಳಿದುಬರುವ ಸಂಗತಿ. ಇದು ಹೊಯ್ಸಳರ ದೇವಾಲಯಗಳ ಶಿಖರಗಳ ಸುಖನಾಸಿಯ ಮೇಲ್ಬಾಗದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಈ ಶಿಲ್ಪವು ಹೊಯ್ಸಳರ ರಾಜಲಾಂಛನವಾಗಿತ್ತೆಂದು ಬಿ. ಎಲ್. ರೈಸ್, ವಿಲಿಯಂ ಕೊಯಿಲೊ, ಜೆ. ಡಿ. ಎಂ. ಡೆರೆಟ್, ಎಸ್. ಶೆಟ್ಟರ್, ಪಿ. ಬಿ. ದೇಸಾಯಿ ಮತ್ತು ಡಾ. ಸೂರ್ಯನಾಥ ಕಾಮತ್ ಮುಂತಾದವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಈ ಶಿಲ್ಪವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಶಿಲ್ಪದಲ್ಲಿರುವ ಪ್ರಾಣಿಯು ಹುಲಿಯಲ್ಲ ಬದಲಿಗೆ ಸಿಂಹ ಎಂದು ತಿಳಿಯುತ್ತದೆ. ಅದರ ಕೊರಳ ಸುತ್ತಲೂ ಇರುವ ಕೇಸರಗಳ ಕೆತ್ತನೆಯು ಇದಕ್ಕೆ ಸಾಕ್ಷಿಯಾಗಿದೆ. ಹೊಯ್ಸಳರ ಕಾಲದ ಶಿಲ್ಪಿಗಳು ಸೂಕ್ಷ್ಮವಾದ ಕುಸುರಿ ಕೆಲಸದ ಕುಶಲತೆಗೆ ಹೆಸರುವಾಸಿಯಾಗಿದ್ದಾರೆ. ವಿಶೇಷವಾಗಿ ಅವರ ಕೆತ್ತನೆಗಳಲ್ಲಿ ಗಮನಿಸಬಹುದಾಗಿದೆ. ಹುಲಿಯಾಗಿದ್ದರೆ ಮೈ ಮೇಲೆ ಪಟ್ಟೆಗಳನ್ನು ಅವಶ್ಯಕವಾಗಿ ಕೆತ್ತನೆ ಮಾಡಿರುತ್ತಿದ್ದರು. ಸಳನ ಶಿಲ್ಪವೆಂದು ಹೇಳಲಾಗುವ ಶಿಲ್ಪವು ಸಹಸಳನದ್ದೆಂದು ಹೇಳಲು ಯಾವ ಖಚಿತ ಪುರಾವೆಗಳು ಇಲ್ಲ. ಈ ಶಿಲ್ಪದಲ್ಲಿರುವ ಸಿಂಹದೊಡನೆ ಹೋರಾಡುತ್ತಿರುವ ವ್ಯಕ್ತಿಗೆ ಕೋರೆಹಲ್ಲುಗಳು ಇರುವುದನ್ನು ಬಳ್ಳಿಗಾವೆ, ನಾಡಕಲಸಿ, ಹಳೇಬೀಡು, ಕೋರಮಂಗಲ ಮುಂತಾದ ಸ್ಥಳಗಳಲ್ಲಿರುವ ಶಿಲ್ಪಗಳಲ್ಲಿ ಕಾಣಬಹುದಾಗಿದೆ. ಇದರಿಂದಾಗಿ ಆತ ರಾಕ್ಷಸನಾಗಿದ್ದಿರಬಹುದು ಎಂಬ ಸಂಶಯ ಬರುತ್ತದೆ. ಹೊಯ್ಸಳರ ದೇವಾಲಯಗಳಲ್ಲಿ ಮಾಡಿರುವಂತಹ ಶಿಲ್ಪಗಳ ಕೆತ್ತನೆಗಳು ಅವರ ರಾಜಲಾಂಛನವಲ್ಲ. ಹೊಯ್ಸಳರ ರಾಜಲಾಂಛನವನ್ನು ಗುರುತಿಸಲು ಶಾಸನಗಳು ಹೆಚ್ಚು ಸಹಕಾರಿಯಾಗಿವೆ. 'ಹುಲಿ' ಅಥವಾ 'ಬೆತ್ತದ ಸೆಳೆಯೊಂದಿಗಿರುವ ಹುಲಿ'ಯು ಹೊಯ್ಸಳರ ರಾಜಲಾಂಛನ ಎಂಬುದನ್ನು ಹಲವಾರು ಶಾಸನಗಳು ದಾಖಲಿಸಿವೆ. ಹಾಸನ ಜಿಲ್ಲೆಯ ಹೊನ್ನಾವರದ ಒಂದು ಶಾಸನದಲ್ಲಿ 'ಪುಲಿಯೆ ವಿಜಯ ಲಾಂಛನ', ಹಾಸನ ತಾಲ್ಲೂಕಿನ ಹೆರಗು ಗ್ರಾಮದಲ್ಲಿ ದೊರೆತಿರುವ ಶಾಸನವೊಂದರಲ್ಲಿ 'ಶಾರ್ದೂಲ ಕೇತನ', ಇನ್ನೊಂದು ಶಾಸನದಲ್ಲಿ 'ಶಾರ್ದೂಲ ಲಾಂಛನ', ಶಾಂತಿಗ್ರಾಮದ ಶಾಸನದಲ್ಲಿ 'ವ್ಯಾಘ್ರಕೇತನ' ಎಂಬ ಉಲ್ಲೇಖಗಳು ದೊರೆತಿವೆ. ಹಳೇಬೀಡಿನ ಪ್ರಸಿದ್ಧ ಶಾಸನವಾದ ಕುವರಲಕ್ಷ್ಮನ ಶಾಸನದಲ್ಲಿ 'ಜಿನಮುನಿಪೋತ್ತಮಂ ಬೆತ್ತದ ಸೆಳೆಯಿಂದ ಪುಲಿಯಂ ಪೊಯ್ಸಳಯೆಂದೊಡಾ ಸಳ ನೃಪಂಗೆ ಪೊಯಿಸಳಾಭಿದಾನಮಾದುದಾ ಶಾರ್ದ್ದೂಳಂ ಪತಾಕಾ ಪ್ರವಿರಾಜಿತ ಚಿತ್ರ ಚಿಕ್ಕಮಾದುದು' ಎಂಬ ಒಕ್ಕಣೆ ಸಿಗುತ್ತದೆ. ಈ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ 'ಹುಲಿ' ಅಥವಾ 'ಬೆತ್ತದ ಸೆಳೆಯೊಂದಿಗಿರುವ ಹುಲಿ'ಯು ಹೊಯ್ಸಳರ ರಾಜಲಾಂಛನ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ8. ಎಂ. ಜಿ. ಮಂಜುನಾಥ ಅವರು ಈ ಶೋಧನೆಗಳನ್ನು ಆಧಾರ ಸಹಿತವಾಗಿ ವಿವರಣೆ ನೀಡಿ ನಿರೂಪಿಸಿರುವುದರಿಂದ ಇತಿಹಾಸದಲ್ಲಿ ದಾಖಲಾಗಿರುವ ವಿವಿಧ ಪ್ರಮುಖ ಅಂಶಗಳ ನೈಜತೆ ಸಾಬೀತಾಗಿದೆ. ಶಾಸನಗಳನ್ನು ಆಕರಗಳನ್ನಾಗಿ ಬಳಸಿಕೊಂಡು ನಿಖರವಾದ ದಾಖಲೆಗಳನ್ನು ನೀಡಿರುವುದರಿಂದ ಇವುಗಳು ಬಹುಮುಖ್ಯವಾದ ಶೋಧನೆಗಳಾಗಿವೆ. ಸಮಕಾಲೀನ ಸಂದರ್ಭದಲ್ಲಿ ಕನ್ನಡ ನಾಡಿನ ಐತಿಹಾಸಿಕತೆಯನ್ನು ತಿಳಿಯುವಲ್ಲಿ ಈ ಸಂಶೋಧನೆಗಳು ಹೊಸ ಆಯಾಮಗಳನ್ನು ರೂಪಿಸಿಕೊಡುತ್ತವೆ. ಹೀಗೆ ಶಾಸನ ಕ್ಷೇತ್ರಕ್ಕೆ ಎಂ. ಜಿ. ಮಂಜುನಾಥ ಅವರು ನೀಡಿರುವ ಕೊಡುಗೆಗಳು ಮಹತ್ವಪೂರ್ಣವಾಗಿವೆ. ಕೊನೆ ಟಿಪ್ಪಣಿಗಳು:- ಎಂ. ಜಿ. ಮಂಜುನಾಥ : ವೈಶಿಷ್ಟ್ಯ ಪೂರ್ಣ ಕನ್ನಡ ಶಾಸನಗಳು, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, 2004, ಪು.ಸಂ. 05. ಎಂ. ಜಿ. ಮಂಜುನಾಥ : ವೈಶಿಷ್ಟ್ಯ ಪೂರ್ಣ ಕನ್ನಡ ಶಾಸನಗಳು, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, 2004, ಪು.ಸಂ. 06. ಎಂ. ಜಿ. ಮಂಜುನಾಥ : ವೈಶಿಷ್ಟ್ಯ ಪೂರ್ಣ ಕನ್ನಡ ಶಾಸನಗಳು, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, 2004, ಪು.ಸಂ. 11. ಎಂ. ಜಿ. ಮಂಜುನಾಥ : ವೈಶಿಷ್ಟ್ಯ ಪೂರ್ಣ ಕನ್ನಡ ಶಾಸನಗಳು, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, 2004 ಪು.ಸಂ. 16. ಎಂ. ಜಿ. ಮಂಜುನಾಥ : ವೈಶಿಷ್ಟ್ಯ ಪೂರ್ಣ ಕನ್ನಡ ಶಾಸನಗಳು, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, 2004 ಪು.ಸಂ. 19. ಎಂ. ಜಿ. ಮಂಜುನಾಥ : ಶಾಸನ ಪರಿಶೋಧನೆ, ಪು.ಸಂ. 22, 23. ಎಚ್. ತಿಪ್ಪೇರುದ್