ಸುಪಾರಿಸ್ವಾಮಿ ಮತ್ತು ಸಕೀನಾ : ವರ್ತಮಾನ ತಲ್ಲಣಗಳಿಗೆ ಮುಖಾಮುಖಿ.

Read full text Summarise with VIRAT
Authors: ಸಚಿನ್ ಜಿ ಹೆಚ್
Cited by: 0

Summary

No summary yet. VIRAT can read this paper and write a plain-language summary of its aim, methods, key findings and limitations.

Summarise with VIRAT Free to try with your Science Catalogs account.

Abstract

ರಾಗಂ ಅವರ ಮೂರನೇ ಕಥಾಸಂಕಲನ ಸುಪಾರಿ ಸ್ವಾಮಿ ಮತ್ತು ಸಕೀನಾ. ವಿಶಿಷ್ಟ ಕಥಾಹಂದರ ಹೊಂದಿರುವ ಈ ಕಥಾಸಂಕಲನವು ವರ್ತಮಾನ ಸಮಾಜದಲ್ಲಿನ ತಲ್ಲಣಗಳನ್ನು ಹಲವು ಪಾತ್ರಗಳ ಮುಖಾಂತರ ನಮ್ಮೆದುರು ಬಿಂಬಿಸುವ ಪ್ರಯತ್ನ ಮಾಡಿದೆ. ಸ್ವಾಮಿ, ಇರ್ಫಾನ್, ಸಕೀನಾ, ಹುಸೇನಿ, ಮುಲ್ಲಾಸಾಬ, ಅಮೀನ, ಮಾದೇವಪ್ಪ, ರಾಚಯ್ಯಸ್ವಾಮಿ ಇನ್ನೂ ಮುಂತಾದ ಪಾತ್ರಗಳು ಕಲ್ಪಿತ ಪಾತ್ರಗಳಲ್ಲ, ಕಥೆಗಾರರ ಸಂಕಟದ ಪ್ರತಿಫಲಗಳು. ಈ ಪಾತ್ರಗಳು ನಮ್ಮ ಸುತ್ತಮುತ್ತಲಿನಲ್ಲಿ ಕಂಡು ಕೇಳಿರುವ ವ್ಯಕ್ತಿತ್ವಗಳೆನಿಸದೆ ಇರದು. ತಮ್ಮ ಜೀವನಾನುಭವದಲ್ಲಿ ಅಲ್ಲಲ್ಲಿ ಕಂಡು ಬಂದ ಹಲವು ಬಗೆಯ ವ್ಯಕ್ತಿತ್ವಗಳನ್ನು ಕಥನಕ್ರಮದೊಳಕ್ಕೆ ಜೋಡಿಸಿಕೊಂಡು ಕಥೆಯಾಗಿಸಿರುವುದನ್ನ ಕಾಣಬಹುದು. ನೈಜ ಪಾತ್ರಗಳ ಮುಖಾಂತರ ಬದುಕಿನಲ್ಲಿ ಮನುಷ್ಯ ಸಂಬಂಧವನ್ನು, ಮನುಷ್ಯತ್ವವನ್ನು ಕಳೆದುಕೊಂಡು ಸಂಕೀರ್ಣಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ರಾಗಂ ಅವರ ಕಥೆಗಳು ನಮ್ಮ ಗಮನ ಸೆಳೆಯುತ್ತವೆ. ಕಥಾವಸ್ತುವಿನಲ್ಲಿರುವ ಸಮಕಾಲೀನತೆ ಹಾಗೂ ಪಾತ್ರಗಳ ಸ್ವಭಾವದಲ್ಲಿರುವ ನೈಜತೆಗಳೆರಡು ಕಥೆಗಳ ಗುಣಾಂಶಗಳಾಗಿವೆ. ಈ ಕಥಾಸಂಕಲನದ ಮೊದಲ ಕಥೆ ‘ಸುಪಾರಿಸ್ವಾಮಿ ಮತ್ತು ಸಕೀನಾ’. ಪತ್ತೇದಾರಿ ಕಥನ ತಂತ್ರವಿರುವ ಈ ಕಥೆಯಲ್ಲಿ ಬರುವ ಪ್ರಮುಖ ಪಾತ್ರ ಸ್ವಾಮಿ. ಈ ಕಥೆಯೊಳಗೆ ಸ್ವಾಮಿಯಿಂದ ಸಾಲು-ಸಾಲು ಕೊಲೆಗಳು ನಡೆಯುತ್ತವೆ. ಪೊಲೀಸರಿಗೆ ಈತನ ಬಗ್ಗೆ ಅನುಮಾನವಿದ್ದರೂ ಸಾಕ್ಷಿಯಿಲ್ಲದೆ ಆತ ಬಚಾವಾಗೋದು, ಕೊನೆಗೆ ರಹಸ್ಯ ಸಂಕೇತಗಳಿಂದಲೇ ಹತ್ಯೆಯ ಹಿಂದಿರುವ ಸಂಚನ್ನು ಭೇದಿಸಿದ ಪೊಲೀಸರ ಬಂದೂಕಿನಿಂದಲೇ ಸ್ವಾಮಿ ಹತನಾಗುವುದು ಇದು ಸರಳವಾಗಿ ಗ್ರಹಿಸಬಹುದಾದ ಕಥಾವಸ್ತುವಾದರೂ ಓದುಗರ ಕುತೂಹಲ ಕೆರಳಿಸುತ್ತದೆ. ಕಥೆಯಲ್ಲಿ ಇನ್ನೂ ಅನೇಕ ಸೂಕ್ಷ್ಮ ವಿಷಯಗಳಿವೆ. ಸ್ವಾಮಿ ಮತ್ತು ಇರ್ಫಾನ್ ಒಳ್ಳೆ ಸ್ನೇಹಿತರಾಗಿದ್ದರು, ಆದರೆ ಇವರಿಬ್ಬರ ನಡುವೆ ಎಲೆಕ್ಷನ್ ಬಿರುಗಾಳಿ ಬೀಸಿ ಇಬ್ಬರ ನಡುವಿನ ಜಗಳ ಸಾವಿನಲ್ಲಿ ಅಂತ್ಯವಾಗುತ್ತದೆ. ಎಲೆಕ್ಷನ್ ಒಂದು ನೆಪವಾಗಿತ್ತು ಆದರೆ ಅವರಿಬ್ಬರ ನಡುವಿನ ಸ್ನೇಹ ದ್ವೇಷಕ್ಕೆ ತಿರುಗುತ್ತದೆ. ಹೀಗೆ ವರ್ತಮಾನ ಸಂದರ್ಭದಲ್ಲಿ ಎಷ್ಟು ಹಳ್ಳಿಗಳಲ್ಲಿ ಭಿನ್ನ ಸಮುದಾಯಗಳಲ್ಲಿರುವ ಜನರ ಮಧ್ಯೆ ಅನಾರೋಗ್ಯಕರ ಬೆಳವಣಿಗೆಗಳು ನಡೆದು ಭೀಕರ ಸ್ವರೂಪಕ್ಕೆ ಬದಲಾಗುತ್ತವೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಸಾವಿನಲ್ಲಿ ಅಂತ್ಯವಾಗುತ್ತಿರುವುದು ಅತ್ಯಂತ ವಿಷಾದನೀಯವಾಗಿರುವಂತದ್ದು. ಇರ್ಫಾನನನ್ನು ಕೊಂದಿದ್ದಕ್ಕೆ ಗುಡಿ ಗುಂಡಾರಗಳನ್ನೆಲ್ಲ ಸುತ್ತಿದ್ದರೂ ಸ್ವಾಮಿಗೆ ಆತನ ಸಾವು ಬೆಂಬಿಡದೆ ಕಾಡಿದ್ದು ಎಲ್ಲಿಲ್ಲದ ಸಂಕಟ, ಅಸಮಾಧಾನ, ಅಪಮಾನ ಅನುಭವಿಸುತ್ತಿದ್ದು ಸಕೀನಾಳಿಗೆ ಮಾತ್ರ ತಿಳಿದ ವಿಚಾರ. ಸಾವಿನ ಕಾಡುವಿಕೆಯ ಪರಿಣಾಮ ಎಷ್ಟಿತ್ತೆಂದರೆ “ನಾ ಯಾಕ ಹೊಡೆದ್ನೋ? ಅವನಯಾಕ ಸತ್ತೋ? ನೀ ಯಾಕ ಗುಳದಾಳಿ ಹರಕೊಂಡು ಈ ಗುಂಡಾನ ಬೆನ್ನುಹತ್ತಿ ಬಂದಿಯೋ? 1 ಎನ್ನುವ ಕಾಡುವಿಕೆಯ ಪ್ರಜ್ಞೆ ಪ್ರತಿಯೊಬ್ಬ ಕೊಲೆಗಾರ ಅಂತರಾಳದಲ್ಲಿ ಗಿರಕಿ ಹೊಡೆಯುತ್ತಿರುತ್ತದೆ. ಇದನ್ನ ಗಮನಿಸೋದು ಸಕೀನಾ, ರಾಕ್ಷಸ ರೂಪದಲ್ಲಿ ಇರಿದು ಕೊಂದವನಲ್ಲಿಯೂ ಹೂವಿನಂಥ ಮನುಷ್ಯನಿದ್ದಾನೆ. ಕ್ಷುಲ್ಲಕ ಕಾರಣಕ್ಕಾಗಿ ಇರ್ಫಾನ್‌ನ ಜೀವ ತೆಗೆದ ಸ್ವಾಮಿ ತಾನು ಯಾಕೆ ಕೊಂದೆ ಎಂದು ಪ್ರಶ್ನಿಸಿಕೊಳ್ಳುತ್ತಾನೆ. ಸಂಕಟಪಟ್ಟುಕೊಳ್ಳುವ ಸ್ವಾಮಿ ಹತ್ಯೆಯನ್ನೇ ದಂಧೆಯಾಗಿ ಮಾಡಿಕೊಳ್ಳುವುದು ವಿಪರ್ಯಾಸ. ಆದರೆ “ಐದು ಸಾವಿರೋ, ಐವತ್ತು ಸಾವಿರೋ ಸುಫಾರಿಗೆ ಸ್ವಾಮಿ ತೆಗೆದುಕೊಳ್ಳುವ ತಾನೇ ಒಂದು ದಿನ ಹೆಣ ಆಗಿ ಬಿದ್ರೆ ಗತಿ ಏನು? ಈ ಪ್ರಶ್ನೆ ಸಕೀನಾಳಿಗೆ ಹಾಗೆ ಕಾಡುತ್ತಿರುವುದು ಇಂದಲ್ಲ ನಿನ್ನೆಯದಲ್ಲ ಬರೋಬ್ಬರಿ ನಲವತ್ತು ವರ್ಷ. ಆದ್ರ ಸ್ವಾಮಿ ಕೆಟ್ಟ ಹಠಮಾರಿ. ತಾನು ಬ್ಯಾಡ ಅಂದ್ರೂ, ಬಿಡೋ ಅಸಾಮಿನೂ ಅಲ್ಲ, ಬ್ಯಾಡಂತ ಹೇಳಲಿಕ್ಕೆ ಸಕೀಳಾಗೆ ಬಾಯಿನೂ ಇಲ್ಲ.” 2 ಎನ್ನುವ ಸಕೀನಾಳ ಅಂತರಂಗದ ಸಂಕಟಕ್ಕೆ ಈ ಮಾತುಗಳು ಸಾಕ್ಷೀಕರಿಸುತ್ತವೆ. ಸ್ವಾಮಿ ಮಾಡುವ ಕೆಲಸ ಅನೈತಿಕ, ಅಮಾನವೀಯತೆ ಅಂತ ಗೊತ್ತಿದ್ದರೂ ಹೇಳಲು ಧ್ವನಿಯಿಲ್ಲ, ಧೈರ್ಯ ಇಲ್ಲ, ಒಪ್ಪಿಕೊಳ್ಳುವ ಮನಸ್ಥಿತಿ ಆಕೆಯದ್ದಾಗಿದೆ. ಕೊಲೆ ಮಾಡುವುದು ಕಾನೂನಿಂದ ಕಠಿಣ ಶಿಕ್ಷೆ ಇದೆಯೆಂದು ಗೊತ್ತಿದ್ದರೂ ಮನುಷ್ಯ ಇಂಥ ಹೇಯಕೃತ್ಯಕ್ಕೆ ಮುಂದಾಗುತ್ತಿದ್ದಾನೆ. ಹೀಗಿರುವಾಗ ಮನುಷ್ಯ-ಮನುಷ್ಯನ ನಡುವೆ ಯಾಕಿಷ್ಟು ದ್ವೇಷ, ಹಪಹಪಿತನ ಮುಖ್ಯವಾಗಿರುವುದಕ್ಕೆ ಮಾನವೀಯ, ಅಪರಾಧಿ ಪ್ರಜ್ಞೆ ಕಾಡದೆ ಇರದು. ಕಾನೂನಿಗೂ ಹೆದರದ ಮನುಷ್ಯ ಆತ್ಮಸಾಕ್ಷಿಗಾದರೂ ಭಯಗೊಳ್ಳುತ್ತಾನೆ. ಕೊನೆಗೆ ತನ್ನ ಆತ್ಮಸಾಕ್ಷಿ ಕಾಡಿಯೇ ಕಾಡುತ್ತದೆ. ಯಾರಿಗೆ ಬೇಕಾದರೂ ಮೋಸ ಮಾಡಬಹುದು, ತನ್ನ ಆತ್ಮಸಾಕ್ಷಿಗೆ ಮೋಸ, ವಂಚನೆ ಮಾಡಲಿಕ್ಕೆ ಆಗುವುದಿಲ್ಲ. ತನ್ನ ಅಪರಾಧಿತನಕ್ಕೆ ದೇವರ ಮೊರೆ ಹೋದರೂ, ಕಾನೂನು ಕಣ್ಣಿನಿಂದ ತಪ್ಪಿಸಿಕೊಳ್ಳಲಿಕ್ಕೆ ಸಾಧ್ಯವಿಲ್ಲ. ತಪ್ಪು ಮಾಡಿದವರು ಶಿಕ್ಷೆಯನ್ನು ಅನುಭವಿಸಲೇಬೇಕು ಎಂತಹ ಕೊಲೆಗಾರನಾದರೂ ಸಹ ಒಂದಲ್ಲ ಒಂದು ರೀತಿಯ ಸುಳಿವು ಬಿಟ್ಟು ಹೋಗಿರುತ್ತಾನೆ, ಅದರಿಂದಲೇ ಆತ ಮಣ್ಣಾಗುತ್ತಾನೆ. ಮನುಷ್ಯನಿಗೆ ಸ್ವಾರ್ಥ, ಸ್ವಪ್ರತಿಷ್ಠೆ ಮುಖ್ಯವಾಗಿ, ಮನುಷ್ಯತ್ವ ಮರೆಯಾಗಿ, ಕ್ರೂರತ್ವ ಬೆಳೆಸಿಕೊಳ್ಳುವವ ಸ್ವಾಮಿಗೆ, ಕೊಂದು ತಿನ್ನುವ ಬದುಕು ತಪ್ಪು ಎಂದು ಗೊತ್ತಿದ್ದರೂ ಮತ್ತೆ-ಮತ್ತೆ ಆ ತಪ್ಪುಗಳನ್ನು ಮಾಡುತ್ತಲೇ ಇರುತ್ತಾನೆ. ಯಾವಾಗ ಆ ತಪ್ಪುಗಳು ಕಾಡುತ್ತವೆಯೋ ಅಪರಾಧಿಪ್ರಜ್ಞೆ ಮೂಡುತ್ತದೆ. ಮನುಷ್ಯ ಪರಿಸ್ಥಿತಿ ಕೈಗೊಂಬೆಯಾದಾಗ ಆತನಿಗೆ ತನ್ನ ಕೇಡಿನ ತೀವ್ರತೆ ಅರಿವಾಗುವುದಿಲ್ಲ. ಯಾವ ತೀರ್ಥಯಾತ್ರೆ ಕೈಗೊಂಡರೂ ನಿರರ್ಥಕ. ತಾನು ಮಾಡಿದ ತಪ್ಪಿಗೆ ಆತ್ಮಸಾಕ್ಷಿ ಆತನನ್ನೇ ಕಾಡುತ್ತಿರುತ್ತದೆ. ಈ ಕಥೆಯಲ್ಲಿ ಬರುವ ಮತ್ತೊಂದು ಮುಖ್ಯವಾದ ಪಾತ್ರವೆಂದರೆ ಸಕೀನಾ, ಇರ್ಫಾನ್‌ಳ ಹೆಂಡತಿ. ಸ್ವಾಮಿ ತನ್ನ ಗೆಳೆಯನಾದ ಇರ್ಫಾನನನ್ನು ಕೊಂದು, ಸಕೀನಾಳನ್ನು ಓಡಿಸಿಕೊಂಡು ಬಂದು ತನ್ನ ಜೊತೆಗೆ ಇಟ್ಟುಕೊಳ್ಳುತ್ತಾನೆ. ಗಂಡನನ್ನು ಕೊಂದವನ ಜೊತೆ ಅವಳು ಬರುವುದು ವಿಚಿತ್ರ ಎನಿಸದೆ ಇರದು. ಆದರೆ ಸಕೀನಾ ಮತ್ತು ಇರ್ಫಾನ್ ನಡುವೆ ಸಂಸಾರ ಅಷ್ಟಕ್ಕಷ್ಟೆ. ಸೋದರ ಮಾವ ಆದರೂ ಆತನನ್ನು ಕಂಡರೆ ಆಗುತ್ತಿರಲಿಲ್ಲ, ಆತನು ಅಷ್ಟೇ ಈಕೆಯನ್ನ ದೂರಾನೇ ಇಟ್ಟಿದ್ದನು. ಇವರಿಬ್ಬರ ನಡುವಿನ ಅಷ್ಟಕ್ಕಷ್ಟೇ. ಸ್ವಾಮಿ ಜೊತೆ ಸಕೀನಾ ಬಂದಾಗಿನಿಂದಲೂ ಒಂದಿಷ್ಟು ಖುಷಿ ಸಂಭ್ರಮವಿದೆಯೇ ಹೊರತು ಒಂಟಿತನ ಸಂಕಟದಿಂದ ಮುಕ್ತವಾಗಿಲ್ಲ. ಸ್ವಾಮಿ ಮಾಡುವ ಕೊಲೆಗಳಿಗೆ ಈಕೆಯೇ ಸುಪಾರಿ ಏಜೆಂಟ್ ಆಗಿದ್ದಳು. ಸ್ವಾಮಿ ಹತ್ಯೆ ಮಾಡುವ ರಾತ್ರಿ ಆಕೆಯ ಮೈಮನ ಜೊತೆ ಸಂಬಂಧವಿತ್ತೇ ವಿನಃ ಕೊಲೆ ನಂತರ ತಿಂಗಲಾನುಗಟ್ಟಲೆ ವೇಷಮರೆಸಿಕೊಂಡು ಬದುಕುತ್ತಿದ್ದ. ಆದರೆ ಸಕೀನಾಳಿಗೆ ಮಾತ್ರ ಸುಖದಲ್ಲಿ ಒಂದಿಷ್ಟು ಕಡಿಮೆ ಮಾಡುತ್ತಿರಲಿಲ್ಲ. ಆದರೆ ಸ್ವಾಮಿ ಪಾತಕ ಜೀವನ ಯಾಕೆ ಒಪ್ಪಿಕೊಂಡ ಆಕೆಗೂ ತಿಳಿಯದ ಸಂಗತಿಯಾಗಿತ್ತು. ಇನ್ನೂ ಈ ಕಥೆಯಲ್ಲಿ ಬರುವ ಮತ್ತೊಂದು ಪ್ರಮುಖ ಪಾತ್ರ ಅಲಿಪಾಕ್ ಹುಸೇನಿ. ಈತ ಸಕೀನಾ ಮತ್ತು ಸ್ವಾಮಿ ಮಧ್ಯೆ ಸುಪಾರಿಯ ರಹಸ್ಯ ಸುದ್ದಿಯ ಸಂಕೇತದ ಚೀಟಿಯನ್ನು ರವಾನಿಸುತ್ತಿದ್ದವನು. ಹುಸೇನಿ ಸುಪಾರಿಸ್ವಾಮಿಯ ನಂಬಿಕೆಗೆ ಅರ್ಹನಾದ ವ್ಯಕ್ತಿಯಾಗಿದ್ದರೂ ಕೊನೆಯಲ್ಲಿ ಸ್ವಾಮಿಯನ್ನು ಹಿಡಿಯುವಲ್ಲಿ ಪೊಲೀಸರಿಗೆ ಸಹಕಾರ ನೀಡುತ್ತಾನೆ. ಎಷ್ಟೇ ವಿಶ್ವಾಸಾರ್ಹ ವ್ಯಕ್ತಿಯಾಗಿದ್ದರೂ ಯಾರನ್ನು ನಂಬುವ ಕಾಲವಲ್ಲ, ಮಿತ್ರನಿದ್ದವನು ಶತ್ರುವಾಗುತ್ತಾನೆ, ಶತ್ರುವಾಗಿದ್ದವನು ಮಿತ್ರನಾಗುವ ವಿಚಿತ್ರ ಪ್ರಕ್ಷುಬ್ಧ ಕಾಲವಿದು.. ರಾಗಂ ಅವರ ಈ ಕಥೆಯಲ್ಲಿ ಪಾಪಪ್ರಜ್ಞೆ, ಮನುಷ್ಯ ಸಂಬಂಧಗಳ ಗ್ರಹಿಕೆ, ಸ್ತ್ರೀ ಸಂವೇದನಾ ನೆಲೆ, ಹೆಣ್ಣಿನ ಸಂಕಟಗಳು ಮತ್ತು ಮಾನವೀಯ ಮೌಲ್ಯಗಳ ಕುಸಿತ, ಅಪರಾಧಿತನ, ಆತ್ಮಸಾಕ್ಷಿ ಇನ್ನಿತರ ಅನೇಕ ಸೂಕ್ಷ್ಮ ವಿಷಯಗಳು ಗುಪ್ತಗಾಮಿನಿಯಾಗಿ ಈ ಕಥಾಸಂಕಲನದಲ್ಲಿ ಹರಿಯುತ್ತಿರುವುದನ್ನು ಗ್ರಹಿಸಬಹುದಾಗಿದೆ. ಉತ್ತರ ಕರ್ನಾಟಕದ ಬಿಜಾಪುರದ ಸುತ್ತಣ ಭಾಷೆಯನ್ನು ಸಮರ್ಥವಾಗಿ ಲೇಖಕರು ಬಳಸಿಕೊಂಡಿರುವುದನ್ನು ಕಾಣಬಹುದು. ದೇಶಿ ಸೊಗಡಿನ ಕಥೆಗಳು ಮನ ಮುಟ್ಟುತ್ತವೆ, ಓದುಗರನ್ನು ಕಾಡುತ್ತವೆ. ಜಾಗತೀಕರಣ ಸಂದರ್ಭದಲ್ಲಿ ಜಗತ್ತು ಸಂಕೀರ್ಣಗೊಳ್ಳುತ್ತಿರುವ ವರ್ತಮಾನದ ಈ ಜಗತ್ತಿನಲ್ಲಿ ಮನುಷ್ಯ ಸಂಬಂಧಗಳಲ್ಲಿ ಕಂದಕಗಳುಂಟಾಗುತ್ತಿವೆ. ಮನುಷ್ಯತ್ವ, ಮಾನವೀಯ ಮೌಲ್ಯಗಳು ಅಧಃಪತನಗೊಳ್ಳುತ್ತಿರುವ ವರ್ತಮಾನದ ಪ್ರಕ್ಷುಬ್ಧ ಸನ್ನಿವೇಶದಲ್ಲಿ ರಾಗಂ ಅವರ ಈ ಕಥೆ ಪ್ರಸ್ತುತ ಮುಖ್ಯವೆನಿಸುತ್ತವೆ. ಕೊನೆ ಟಿಪ್ಪಣಿ:- ರಾಜಶೇಖರಯ್ಯ ಜಿ ಮಠಪತಿ (ರಾಗಂ), ಸುಪಾರಿ ಸ್ವಾಮಿ ಮತ್ತು ಸಕೀನಾ ಕಥೆಗಳು, ವೀರಲೋಕ ಪ್ರಕಾಶನ, 2025, ಪುಟ ಸಂಖ್ಯೆ-25. ರಾಜಶೇಖರಯ್ಯ ಜಿ ಮಠಪತಿ (ರಾಗಂ), ಸುಪಾರಿ ಸ್ವಾಮಿ ಮತ್ತು ಸಕೀನಾ ಕಥೆಗಳು, ವೀರಲೋಕ ಪ್ರಕಾಶನ, 2025, ಪುಟ ಸಂಖ್ಯೆ-23. ಆಕರ ಗ್ರಂಥ ರಾಜಶೇಖರಯ್ಯ ಜಿ ಮಠಪತಿ (ರಾಗಂ), ಸುಪಾರಿ ಸ್ವಾಮಿ ಮತ್ತು ಸಕೀನಾ ಕಥೆಗಳು, ವೀರಲೋಕ ಪ್ರಕಾಶನ, 2025.

Fields of Study & Subjects

Short Stories in Global Literature South Asian Studies and Diaspora Literature: history themes analysis

Publication details

Publication date
31 March 2026
Language
KN